ಬೆಂಗಳೂರು, ಜೂ.7, ಸೆಲ್ಫಿ ವಿಡಿಯೋ ಮಾಡಿಕೊಂಡು ನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ದಿನೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಮೇ 28ರಂದು ಸಹನಟಿ ಚಂದನಾ(29) ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.ಆರೋಪಿ ದಿನೇಶ್‌ನನ್ನು ಕಳೆದ 5 ವರ್ಷಗಳಿಂದ ಚಂದನಾ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಪಡೆದಿದ್ದ ಹಾಗೂ ದೈಹಿಕವಾಗಿ ಚಂದನಾರನ್ನು ಬಳಸಿಕೊಂಡಿದ್ದ ಎಂದು ದೂರು ನೀಡಲಾಗಿತ್ತು.ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿಯಾಗಿದ್ದ ಚಂದನಾ ಮೇ 28ರಂದು ವಿಷಪ್ರಾಶನ ಮಾಡಿದ್ದರು. ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ವಿಷ ಸೇವನೆ ಸೆಲ್ಫಿ ವಿಡಿಯೋ ಮಾಡಿದ್ದ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದರು. ಚಂದನಾ-ದಿನೇಶ್ ಇಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಪ್ರಸ್ತಾಪ ಬಂದಾಗ ಮಾತ್ರ ದಿನೇಶ್ ಮದುವೆಗೆ ನಿರಾಕರಿಸಿದ್ದಾನೆ. ಚಂದನಾ ಮನೆಯವರಿಗೂ ದಿನೇಶ್ ಪೋಷಕರಿಂದ ಅವಮಾನವಾಗಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸದ್ದುಗುಂಟೆ ಪಾಳ್ಯ ಪೊಲೀಸರು ತಿಳಿಸಿದ್ದಾರೆ. ದಿನೇಶ್, ದಿನೇಶ್ ಅಪ್ಪ, ಅಮ್ಮ, ಮಾವ ಹಾಗೂ ಮತ್ತೊಬ್ಬ ಕುಟುಂಬಸ್ಥರು ಸೇರಿದಂತೆ ಐವರ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿತ್ತು. ಇದೀಗ ಪ್ರಮುಖ ಆರೋಪಿ ದಿನೇಶ್‌ನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.