ಹಾಸ್ಯಭರಿತ ಅನನ್ಯ ಗೆಳೆತನದ ಮನರಂಜನೆಯ ಚಲನಚಿತ್ರ ಆಲ್ ಈಸ್ ವೆಲ್‌: ಮುಚಂಡಿಕರ್

All is Well is a unique, humorous and entertaining film about friendship: Muchandikar

ಬೆಳಗಾವಿ 11: ಸ್ನೇಹ ಗೆಳೆತನ ಅದು ಯಾರೊಂದಿಗೂ ನಮ್ಮ ಅರಿವಿಲ್ಲದೆಯೇ. ಆಗುತ್ತದೆ. ಅದಕ್ಕೆ ವಯಸ್ಸು, ಭಾಷೆ, ಧರ್ಮ, ವರ್ಣದ ಯಾವುದೇ ಮಿತಿಯಿಲ್ಲ. ಅಂತಹ ಒಂದು ಅನನ್ಯ ಗೆಳೆತನದ ಯುವಕರ ಕಥಾಹಂದರ ಹೊಂದಿರುವ  ವಾಣಿಶ್ರೀ ಫಿಲ್ಮ್‌ ಪ್ರೊಡಕ್ಷನ್ಸ್‌ನ 'ಆಲ್ ಇಸ್ ವೆಲ್' ಮರಾಠಿ ಚಲನಚಿತ್ರದ ಮೂಲಕ ಮರಾಠಿ ಬೆಳ್ಳಿ ಪರದೆಯ ಮೇಲೆ ಮೂಡಿಬರಲಿದೆ. ಇದು ಅಮರ್, ಅಕ್ಬರ್ ಮತ್ತು ಆಂಟನಿ ಅವರ ಸ್ನೇಹದ ಕಥೆಯಾಗಿದೆ. ಮನರಂಜನೆ ಮತ್ತು ಮಸ್ತಿಯ ಅದ್ಭುತ ಪ್ಯಾಕೇಜ್ ಹೊಂದಿರುವ 'ಆಲ್ ಇಸ್ ವೆಲ್' ಚಲನಚಿತ್ರವನ್ನು ಯೋಗೇಶ್ ಜಾಧವ್ ನಿರ್ದೇಶಿಸಿದ್ದು, ಪ್ರಿಯದರ್ಶನ್ ಜಾಧವ್ ಬರೆದಿದ್ದಾರೆ. ಬೆಳಗಾವಿಯವರಾದ  ಅಮೊದ್ ಮುಚಂಡಿಕರ್, ವಾಣಿ ಹಾಲಪ್ಪನವರ್ ನಿರ್ಮಾಪಕರಾಗಿದ್ದಾರೆ.ಮಲ್ಲೇಶ್ ಸೋಮನಾಥ ಮರುಚೆ, ವಿನಾಯಕ ಪಟ್ಟಣಶೆಟ್ಟಿ ಸಹ-ನಿರ್ಮಾಪಕರಾಗಿದ್ದಾರೆ.  ದೀಪಕ್ ಸಾಂಬ್ರೇಕರ್, ಅಮಿತ್ ಜಾಧವ್ ನಿರ್ಮಾಣ ಮೇಲ್ವಿಚಾರಕರಾಗಿದ್ದು,   ಜೂನ್ 27 ರಂದು 'ಆಲ್ ಇಸ್ ವೆಲ್' ಚಲನಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಅಮೊದ್ ಮುಚಂಡಿಕರ್  ಹೇಳಿದರು. 

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಚಲನಚಿತ್ರವು ಸಂಪೂರ್ಣ ಕುಟುಂಬದೊಂದಿಗೆ ನೋಡಿ ಆನಂದಿಸಬಹುದಾದ ಹಾಸ್ಯಭರಿತ ಚಿತ್ರವಾಗಿದ್ದು, ಮನರಂಜನೆಯ ಅದ್ಭುತ ಕೊಡುಗೆಯಾಗಲಿದೆ ಎಂದು ಅಮೊದ್ ಮುಚಂಡಿಕರ್ ವಿಶ್ವಾಸ ವ್ಯಕ್ತಪಡಿಸಿದರು. 

ಆನಂದ, ಕೋಪ, ಮನಸ್ಸಿನ ರಹಸ್ಯಗಳನ್ನು ವ್ಯಕ್ತಪಡಿಸಲು ಆತ್ಮೀಯ ಸ್ನೇಹಿತರಿದ್ದರೆ ಜೀವನವು ವರ್ಣರಂಜಿತವಾಗುತ್ತದೆ ಎಂಬ ಆಶಯವನ್ನು ಎತ್ತಿಹಿಡಿಯುವ 'ಆಲ್ ಇಸ್ ವೆಲ್' ಚಿತ್ರದ ಮೂಲಕ ಪ್ರಿಯದರ್ಶನ್ ಜಾಧವ್, ಅಭಿನಯ್ ಬೇರ್ಡೆ, ರೋಹಿತ್ ಹಳದಿಕರ್ ಈ ಅದ್ಭುತ ತ್ರಿಮೂರ್ತಿಗಳು ಮೊದಲ ಬಾರಿಗೆ ಒಂದಾಗಿದ್ದಾರೆ. ಇವರೊಂದಿಗೆ ಸಯಾಜಿ ಶಿಂಧೆ, ಅಭಿಜಿತ್ ಚವಾಣ್, ನಕ್ಷತ್ರಾ ಮೇಧೇಕರ್, ಸಾಯಲಿ ಫಾಟಕ, ಮಾಧವ್ ವಾಝೆ, ಅಜಯ್ ಜಾಧವ್, ಅಮೈರಾ ಗೋಸ್ವಾಮಿ, ದಿಶಾ ಕಟ್ಕರ್ ಸೇರಿದಂತೆ ಹಲವು ಕಲಾವಿದರು ತಮ್ಮ ಅಮೋಘ ಅಭಿನಯವನ್ನು ಪ್ರದರ್ಶಿಸಿದ್ದಾರೆ. 

'ಆಲ್ ಇಸ್ ವೆಲ್' ಚಲನಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಂಜಯ್ ಥುಬೆ. ಸಂಗೀತ ಚಿನಾರ್‌-ಮಹೇಶ್, ಅರ್ಜುನ್ ಜನ್ಯಾ ಅವರದ್ದು. ಛಾಯಾಗ್ರಹಣ ಮಯೂರೇಶ್ ಜೋಶಿ ಮತ್ತು ಸಂಕಲನ ಅಥಶ್ರೀ ಥುಬೆ ಅವರದ್ದು. ನೃತ್ಯ ನಿರ್ದೇಶಕ ರಾಜೇಶ್ ಬಿಡ್ವೆ ಮತ್ತು ಸಾಹಸ ದೃಶ್ಯಗಳು ಅಜಯ್ ಠಾಕೂರ್ ಪಠಾಣಿಯಾ ಅವರದ್ದು. ವಸ್ತ್ರ ವಿನ್ಯಾಸ ಕೀರ್ತಿ ಜಂಗಮ್ ಮತ್ತು ಮೇಕಪ್ ಅತುಲ್ ಶಿಧಾಯೆ ಅವರದ್ದು. ಗೀತ ರಚನೆಕಾರ ಮಂದಾರ್ ಚೋಲ್ಕರ್‌. ಗಾಯಕ ರೋಹಿತ್ ರಾವುತ್, ಗಾಯಕಿ ಅಪೇಕ್ಷಾ ದಾಂಡೇಕರ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. 'ಆಲ್ ಇಸ್ ವೆಲ್' ಚಲನಚಿತ್ರವು ಕಲಾವಿದರ ಸುಂದರ ಅಭಿನಯ, ಮಧುರ ಸಂಗೀತ ಮತ್ತು ನಯನಮನೋಹರ ಪ್ರಸ್ತುತಿಯಿಂದ ಶ್ರೀಮಂತವಾಗಿದೆ ಎಂದು ಅವರು ತಿಳಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಆಲ್ ಇಸ್ ವೆಲ್' ಚಲನಚಿತ್ರ ತಂಡದವರು ಉಪಸ್ಥಿತರಿದ್ದರು.