ವರನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ
ಧಾರವಾಡ ಏ.24: ರಾಜಕುಮಾರ ಕೇವಲ ವ್ಯಕ್ತಿ, ನಟ ಅಷ್ಟೆ ಅಲ್ಲ, ಅವರೊಬ್ಬ ಪರಿಪೂರ್ಣ ವ್ಯಕ್ತಿತ್ವದ ಆದರ್ಶ ಮುನುಷ ಅವರು. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ಕನ್ನಡ ನಾಡು, ನುಡಿ, ಭಾಷೆ, ಭೂಮಿಯ ರಕ್ಷಣೆಗಾಗಿ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದು ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ, ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವರನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಗೋಕಾಕ ಚಳುವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟ ಸಾರ್ವಭೌಮ, ರಾಜಕುಮಾರ ಅವರ ಭಾಷಾಭಿಮಾನ ನಮಗೆಲ್ಲ ಸ್ಪೂರ್ತಿಯ ಚಿಲುಮೆಯಾಗಿದ್ದು, ಇದುವೇ ನಮಗೆಲ್ಲ ಕನ್ನಡ ಉಳಿಸಿ ಬೆಳೆಸುವ ಶಕ್ತಿ ನೀಡಿದೆ ಎಂದ ಅವರು, ತಮ್ಮ ಅಭಿನಯದ ಮೂಲಕ ನಾಡಿನ ಪ್ರತಿಯೊಬ್ಬರ ಹೃದಯದಲ್ಲಿ ಡಾ. ರಾಜಕುಮಾರ ಅಮರರಾಗಿದ್ದಾರೆ ಎಂದು ಭುವನೇಶ ಪಾಟೀಲ ಅವರು ತಿಳಿಸಿದರು.
ಡಾ. ರಾಜ್ ಅವರು ಜೀವನದುದ್ದಕ್ಕೂ ಕನ್ನಡ ಚಿತ್ರ ಹೊರತುಪಡಿಸಿ ಬೇರೆ ಸಿನಿಮಾ ಮಾಡಿಲ್ಲ. ಇದು ಅವರ ಭಾಷಾಭಿಮಾನ ತೋರಿಸುತ್ತದೆ. ಅಪಹರಣ ಘಟನೆ ಜರುಗದೆ ಇದ್ದಿದ್ದರೆ ಡಾ. ರಾಜಕುಮಾರ ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರುತ್ತಿದ್ದರು ಎಂದರು.
ಡಾ. ರಾಜಕುಮಾರ ಅವರನ್ನು ನಾವು ನಟಸಾರ್ವಭೌಮ, ಬಂಗಾರದ ಮನುಷ್ಯ, ಗಾನಗಂಧರ್ವ ಎಂದು ಹೀಗೆ ಅನೇಕ ಹೆಸರುಗಳಿಂದ ಅವರನ್ನು ಕರೆಯುತ್ತೇವೆ. ಸಮಾಜದಲ್ಲಿ ಎಷ್ಟೋ ಜನ ಕಲಾವಿದರು ಇದ್ದಾರೆ ಆದರೆ ನಟನೆಯ ಜೊತೆ ಸಂಗೀತದಲ್ಲಿ ಸಹ ಸಾಧನೆ ಮಾಡಿದ್ದರು. ಇಂತಹ ಸಾಧನೆ ಮಾಡಿದ್ದು ಕೇವಲ ಡಾ. ರಾಜಕುಮಾರ ಅವರು ಮಾತ್ರ ಎಂದು ಸಿಇಓ ಭುವನೇಶ ಪಾಟೀಲ ಅವರು ಹೇಳಿದರು.
ನ್ಯಾಷನಲ್ ಅವಾರ್ಡ್ ಕನ್ನಡಿಗರಿಗೆ ಮೊದಲು ದೊರೆತಿದ್ದು ಅದು ಡಾ. ರಾಜಕುಮಾರ ಅವರಿಗೆ. ಇಷ್ಟೆಲ್ಲ ಸಾಧನೆ ಮಾಡಿದರು ಸಹ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದವರು. ಎಷ್ಟೋ ಜನ ಕಲಾವಿದರು ಬಂದಿದ್ದಾರೆ, ಹೋಗಿದ್ದಾರೆ. ಅದರಲ್ಲಿ ಯಾರ ಮೇಲೆ ಹೆಚ್ಚು ಪ್ರೀತಿ ಇದೆ ಅಂದರೆ ಅದು ಡಾ. ರಾಜಕುಮಾರ ಅವರ ಮೇಲೆ. ಡಾ. ರಾಜಕುಮಾರ ಅವರ ಸುಪ್ರಸಿದ್ಧ ಗೀತೆಯಲ್ಲಿ ಒಂದಾದ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಅದನ್ನು ಕೇಳಿದರೆನೇ ಮೈಯಲ್ಲಿ ಏನೋ ಒಂದು ರೀತಿ ರೋಮಾಂಚನವಾಗುತ್ತದೆ ಎಂದು ಹೇಳಿದರು.
ಜೇಮ್ಸ್ ಬಾಂಡ್ ಅದು ಕೇವಲ ಹಾಲಿವುಡ್‌ನಲ್ಲಿ ಅತೀ ಪ್ರಸಿದ್ಧಿ ಆದ ಪಾತ್ರ. ಆ ರೀತಿಯ ಪಾತ್ರವನ್ನು ಭಾರತದಲ್ಲಿ ಯಾರಾದರು ಮಾಡಿದ್ದಾರೆ, ಡಾ. ರಾಜ್‌ರನ್ನು ಅದು ಡಾ. ರಾಜಕುಮಾರ ಅವರು. ನ್ಯೂಯಾರ್ಕ್ ಟೈಮ್ಸ್ ಅವರು ಭಾರತದ ಸೂಪರ್ ಸ್ಟಾರ್ ಎಂದು ಕರೆದಿದ್ದಾರೆ. ಬೇರೆ ಭಾಷೆಗಳಲ್ಲಿ ನಟನೆಯನ್ನು ಎಂದಿಗೂ ಮಾಡಲಿಲ್ಲ ಕೇವಲ ಕನ್ನಡ ಭಾಷೆಯಲ್ಲಿ ಅವರು ನಟನೆ ಮಾಡಿದ್ದಾರೆ. ಬೇರೆ ಭಾಷೆಯಲ್ಲಿ ಅವರಿಗೆ ಆಫರ್ ಬಂದರೂ ಸಹ ಅದನ್ನು ತಿರಸ್ಕರಿಸಿದರು. ಅಷ್ಟೊಂದು ಕನ್ನಡ ಅಭಿಮಾನ ಅವರಲ್ಲಿ ಇತ್ತು ಎಂದು ಭುವನೇಶ ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಜನಮೆಚ್ಚಿದ ಕಲಾವಿದ ಸೋಮಶೇಖರ ಜಾಡರ ಅವರು ವಿಶೇಷ ಉಪನ್ಯಾಸ ನೀಡಿ, ಮಾತನಾಡಿ, ರಾಜ್ಯ ಸರ್ಕಾರ ಡಾ. ರಾಜಕುಮಾರ ಅವರ ಜಯಂತಿಯನ್ನು ಆಚರಿಸುವುದು ಅತ್ಯಂತ ಶ್ಲಾಘನೀಯ ಕಾರ್ಯ ರಾಜಮಯ ಈ ಲೋಕ ಎಲ್ಲ ಎನ್ನುವ ಹಾಗೆ ಇಡೀ ರಾಜ್ಯದಲ್ಲಿ ಎಲ್ಲ ಕಡೆಗೂ ಇಂದು ಡಾ. ರಾಜಕುಮಾರ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ವರ್ಷಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ನೆನಪಿಸಿಕೊಳ್ಳುವ ವ್ಯಕ್ತಿ ಡಾ. ರಾಜ್ ಅವರು ಅಲ್ಲ. ಅವರು ನಟಿಸಿದ ಪಾತ್ರಗಳು, ಚಿತ್ರಗಳು, ಗೀತೆಗಳು, ಪದೇ ಪದೇ ನೆನಪಿಗೆ ಬರುತ್ತವೆ. ಅವರ ಸರಳ ಸ್ವಭಾವ, ಸಜ್ಜನಿಕೆ, ಪ್ರಾಮಾಣಿಕತೆ ಎಲ್ಲ ಸಮುದಾಯದ ಪ್ರೀತಿಗೆ ಪಾತ್ರವಾಗಿತ್ತು. ಡಾ. ರಾಜಕುಮಾರ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಕಳೆದು ಹೋಗಿ 19 ವರ್ಷ ಆದರೂ ಅವರು ನಮ್ಮೊಂದಿಗೆ ಇದ್ದಾರೆ; ನಮ್ಮ ಹೃದಯದಲ್ಲಿಯೇ ಇದ್ದಾರೆ ಎಂದು ಅವರು ಹೇಳಿದರು.
ಗೀತ ಗಾಯನ: ಡಾ. ರಾಜಕುಮಾರ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಡಾ.ರಾಜಕುಮಾರ ಗೀತ ಗಾಯನ ಕಾರ್ಯಕ್ರಮಕ್ಕೆ ಜಿ.ಪಂ.ಸಿಇಓ ಭುವನೇಶ ಪಾಟೀಲ ಅವರು ಡಾ.ರಾಜಕುಮಾರ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡು ಹಾಡುವ ಮೂಲಕ ಚಾಲನೆ ನೀಡಿದರು. ಪ್ರೌಢಶಾಲಾ ಶಿಕ್ಷಕ ಹಾಗೂ ಆರ್ಕೆಸ್ಟ್ರಾ ಹಾಡುಗಾರ ಬಾಬಾಜಾನ್ ಮುಲ್ಲಾ, ಬಿಆರ್‌ಪಿ ಜಯಲಕ್ಷ್ಮಿ ಎಚ್., ಯುವ ಗಾಯಕಿ ಅಕ್ಸಾ ಮುಲ್ಲಾ ಹಾಗೂ ಕಂದಾಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಸೊಲಗಿ ಅವರು ಡಾ. ರಾಜಕುಮಾರ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಗೀತ ಗಾಯನದಲ್ಲಿ ಡಾ. ರಾಜಕುಮಾರ ಅಭಿನಯದ ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಲಿನ ಮಳೆಯೋ, ಸನಾದಿ ಅಪ್ಪಣ್ಣ ಚಿತ್ರದ ಕರೆದರು ಕೇಳದೆ ಸುಂದರನೆ, ದೇವತಾ ಮನುಷ್ಯ ಚಿತ್ರದ ಹೃದಯದಲ್ಲಿ ಇದೇನಿದು, ಕವಿರತ್ನ ಕಾಳಿದಾಸ ಚಿತ್ರದ ಓ. ಪ್ರಿಯತಮಾ ಸೇರಿದಂತೆ ಅನೇಕ ಚಿತ್ರಗೀತೆಗಳ ಹಾಡಿ ಗಾನದ ಸುಧೆ ಹರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾದ ಚಲನಚಿತ್ರ ಕಲಾವಿದ ಸೋಮಶೇಖರ ಜಾಡರ, ಗೀತ ಗಾಯನ ಪ್ರಸ್ತುತ ಪಡಿಸಿದ ಬಾಬಾಜಾನ್ ಮುಲ್ಲಾ ಅವರನ್ನು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಸನ್ಮಾನಿಸಿ, ಗೌರವಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ ಸ್ವಾಗತಿಸಿದರು. ಗ್ರಾಮ ಪಂಚಾಯತ ಕೊಟಬಾಗಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಚಕ್ರಸಾಲಿ ಅವರು ಕಾರ್ಯಕ್ರಮ ನಿರೂಪಸಿದರು. ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿನಿಲಯಗಳ ನಿಲಯಪಾಲಕರು, ವಿದ್ಯಾರ್ಥಿಗಳು, ಡಾ.ರಾಜ್ ಅಭಿಮಾನಿಗಳು, ಚಿತ್ರಾ ಪಿಲ್ಮ ಸೊಸೈಟಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.