ಖಾಸಗೀಕರಣ ವಿರೋಧಿಸಿ ಬಿಇಎಂಎಲ್ ನೌಕರರ ಪ್ರತಿಭಟನೆ

ಬೆಂಗಳೂರು, ಅ.26:  ಭಾರತ್ ಅರ್ಥ್ ಮೂವರ್ಸ(ಬಿಇಎಂಎಲ್)ನ್ನು ಖಾಸಗೀಕರಣಗೊಳಿಸಲು  ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನೌಕರರು ನಗರದಲ್ಲಿ ಶನಿವಾರ ಬೃಹತ್  ಪ್ರತಿಭಟನೆ ನಡೆಸಿದರು. 

ನಗರದ ಪುರಭವನ ಮುಂಭಾಗ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯೀಸ್  ಅಸೋಸಿಯೇಷನ್ ನೇತೃತ್ವದಲ್ಲಿ ಸೇರಿದ ನೂರಾರು ಮಂದಿ ಕಾರ್ಮಿಕರು ದೇಶದ ಲಾಭದಾಯಕ  ಕಂಪನಿಗಳಲ್ಲಿ ಒಂದಾಗಿರುವ ಬಿಇಎಂಎಲ್ನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು  ಎಂದು ಒತ್ತಾಯಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ನಿರ್ಧರಿಸಿರುವ ಸರ್ಕಾರಿ ಕಾರ್ಖಾನೆಯನ್ನು  ಖಾಸಗೀಕರಣ ಮಾಡುವ ಹೊಸ ನೀತಿಯನ್ನು ಖಂಡಿಸಿದರು. ಈಗಾಗಲೇ ಒಂದು ವಾರದಿಂದ ಪ್ರತಿಭಟನೆ  ನಡೆಸುತ್ತಿರುವ ಕಾರ್ಖಾನೆಯ ನೌಕರರು, ತಮ್ಮ ಕೂಗು ಕೇಂದ್ರಕ್ಕೆ ಮುಟ್ಟುವ ತನಕ ವಿವಿಧ  ರೀತಿಯ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಕೇಂದ್ರ ವಿಭಾಗದ  ಕಾರ್ಮಿಕರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಕೇಂದ್ರ ಸರ್ಕಾರದ ರಕ್ಷ ಣಾ  ಮಂತ್ರಾಲಯದ ಅಧೀನದಲ್ಲಿರುವ ಮತ್ತು ಸುಮಾರು 53 ವರ್ಷಗಳಿಂದ ಲಾಭದಾಯಕವಾಗಿ ನಡೆದುಕೊಂಡು  ಬರುತ್ತಿರುವ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಉತ್ಪನ್ನ  ತಯಾರಿಸುತ್ತಿರುವ ಬಿಇಎಂಎಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸುತ್ತಿರುವುದು ಸರಿಯಲ್ಲ.  ಇದನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಬಾರದು ಎಂದು ಒತ್ತಾಯಿಸಿದರು.  

 ಕೇಂದ್ರ ಸರ್ಕಾರದ  ನಿರ್ಧಾರದ ವಿರುದ್ದ ಈಗಾಗಲೇ ಬಿಇಎಂಲ್ ಕಾರ್ಖಾನೆಗಳಲ್ಲಿ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗಿತ್ತು.  ಈ ನಿರ್ಧಾರದ ವಿರುದ್ದ ಏಕ ಧ್ವನಿಯನ್ನು ಎತ್ತಲು ಹಾಗೂ  ಪ್ರತಿಭಟನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಇಂದು  ಪ್ರತಿಭಟನೆ ನಡೆಸಲಾಯಿತು ಎಂದು ಸ್ಪಷ್ಟನೆ ನೀಡಿದರು.