ಢಾಕಾ ಅ 24: ಬಾಂಗ್ಲಾ ದೇಶದ ಫೆನಿ ಜಿಲ್ಲೆಯ ಮದರಸವೊಂದರ ವಿದ್ಯಾರ್ಥಿನಿ ನಸ್ರುತ್ ಜಹಾನ್ ರಫೀ ಹತ್ಯೆ ಪ್ರಕರಣದ ಎಲ್ಲಾ 16 ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗುರುವಾರ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಗ್ರಹ ನ್ಯಾಯ ಮಂಡಳಿ ಈ ತೀಪು ಪ್ರಕಟಿಸಿದೆ
ಕಳೆದ ಏಪ್ರಿಲ್ 6 ರಂದು ಮದರಸಾದ ಛಾವಣೆಯ ಮೇಲೆ ವಿದ್ಯಾರ್ಥಿನಿ ನಸ್ರುತ್ ಅವರನ್ನು ಬೆಂಕಿ ಹಚ್ಚಿ ಹತ್ಯೆಮಾಡಲಾಗಿತ್ತು. ಆಕೆಗೆ ನಿರಂತರವಾಗಿ ಲೈಂಗಿಕ ಹಿಂಸೆ ನೀಡುತ್ತಿದ್ದ ಆರೋಪಿ ಮದರಸಾ ಮುಖ್ಯಸ್ಥನ ಬೆಂಬಲಿಗರು ಈ ಕೃತ್ಯ ಎಸಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ನಸ್ರತ್ ನಾಲ್ಕು ದಿನಗಳ ನಂತರ ಢಾಕಾ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದರು.
ಈ ಸಂಬಂಧ ಏಪ್ರಿಲ್ 8 ರಂದು ಸೋನಾಘಾಝಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲ 16 ಆರೋಪಗಳ ವಿರುದ್ದ ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ್ದರು.
ವಿದ್ಯಾರ್ಥಿನಿ ಹತ್ಯೆ ಕೃತ್ಯದಲ್ಲಿ ತಾವು ಬಾಗಿಯಾಗಿರುವುದನ್ನು ಎಲ್ಲಾ 16 ಆರೋಪಿಗಳು ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದರು.
ಕೊಲೆ ಪ್ರಕರಣ ಸಂಬಂಧ ಅಂದಿನ ಸೋನಾಘಾಝಿ ಮಾದರಿ ಪೊಲೀಸ್ ಠಾಣೆಯ ಉಸ್ತುವಾರಿ ಮೋಝಂ ಹೊಸೇನ್ ಅವರನ್ನು ಸೇವೆಯಿಂದ ಆಮಾನತ್ತುಗೊಳಿಸಿತ್ತು.
ವಿದ್ಯಾರ್ಥಿನಿ ನಸ್ರತ್ ಅವರನ್ನು ಕಾನೂನು ಬಾಹಿರವಾಗಿ ವಿಚಾರಣೆ ನಡೆಸಿದ ಆರೋಪ ಹೊತ್ತಿದ್ದ ಪೊಲೀಸ್ ಅಧಿಕಾರಿ, ವಿಚಾರಣೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಆಧಾರದ ಮೇಲೆ ವಕೀಲರೊಬ್ಬರು ಕಳೆದ ಏಪ್ರಿಲ್ 15 ರಂದು ಡಿಜಿಟಲ್ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.