ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ

Basava Jayanti celebrated under the joint auspices of Lingayat organizations

ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ 


ಬೆಳಗಾವಿ, 7 : ಬೆಳಗಾವಿ ಮಹಾನಗರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವವನ್ನು  ಎಲ್ಲ ವೀರಶೈವ ಹಾಗೂ ಲಿಂಗಾಯತ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಕೇಂದ್ರಿಕೃತವಾಗಿ ಒಂದೆಡೆಗೆ ಆಚರಿಸಲು ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಯಿತು.  

ಬೆಳಗಾವಿ ಶಿವಬಸವನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ, ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವದಳ, ಲಿಂಗಾಯತ ಮಹಿಳಾ ಸಮಾಜ, ಲಿಂಗಾಯತ ಸೇವಾ ಸಮಿತಿ, ಬಸವ ಕಾಯಕಜೀವಿಗಳ ಸಂಘ, ಬಸವೇಶ್ವರ ಯುವಕ ಸಂಘ, ಮಹಾಂತೇಶ ನಗರದ ಲಿಂಗಾಯತ ಧರ್ಮ ಮಹಾಸಭಾ, ಸಹ್ಯಾದ್ರಿನಗರದ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ, ಲಿಂಗಾಯತ ಬಿಸನೇಸ್ ಪೋರಂ, ಶಾಹಾಪೂರದ ಶ್ರೀ ದಾನಮ್ಮದೇವಿ ಮಂದಿರ ಮತ್ತು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್‌ ಈ ಮೊದಲಾದ ಸಂಘ ಸಂಸ್ಥೆಗಳು ಒಮ್ಮತ ನಿರ್ಧಾರಕ್ಕೆ ಬಂದು ಈ ಸಲ ಬಸವ ಜಯಂತಿಯನ್ನು ಸಾಂಘಿಕವಾಗಿ ಆಚರಿಸಲು ಕರೆನೀಡಿದರು. 

ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣಾ ದೇಯನ್ನವರ ಅವರು ಮಾತನಾಡುತ್ತ, ಬಸವಣ್ಣನವರು ವಿಶ್ವ ಮಾನವತೆ ಸಂದೇಶವನ್ನು ನೀಡಿದವರು. ಅವರ ವಿಚಾರಗಳು ದೇಶ ಕಾಲಾತೀತವಾದದ್ದು ಆದರೆ ಬಸವಣ್ಣನವರನ್ನು ನಾವು ಇಂದಿಗೂ ಅರ್ಥೈಸಿಕೊಂಡಿಲ್ಲ. ಬಹುಸಂಘಟನೆಗಳಿಂದ ಸಮಾಜವನ್ನು ಇಬ್ಭಾಗ ಮಾಡದೆ ಒಳಪಂಗಡಗಳನ್ನು ಮರೆತು ಒಂದಾಗಿ ಬಸವ ಜಯಂತಿಯನ್ನು ಒಂದೇ ವೇದಿಕೆಯ ಮೇಲೆ ಆಚರಿಸೋಣ. ಪ್ರತಿಯೊಬ್ಬರು ಜಯಂತಿ ಉತ್ಸವದಲ್ಲಿ ಪಾಲ್ಗೊಂಡಾಗ ಅದು ಸಾರ್ಥಕವೆನಿಸುವುದು. ಸಮಾಜಸಂಘಟನೆಗೆ ಎಲ್ಲ ಕಟ್ಟಿಬದ್ಧರಾಗೋಣವೆಂದು ಹೇಳಿದರು. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ  ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ, ಸಾಮಾಜಿಕ ಸಂಘಟನೆ ಮುಖ್ಯ. ನಮ್ಮಲ್ಲಿ ಅದರ ಕೊರತೆಯಿಂದ ಬೃಹತ್ ಸಮಾಜ ವಿಘಟನೆಯಾಗುತ್ತಿರುವುದು ಆಘಾತಕಾರಿ. ಒಳಭೇದಗಳನ್ನು ತೊರೆದು ಸಮಾನ ಮನಸ್ಕರಾಗಿ ಬಸವಣ್ಣನವರ ವಿಚಾರದಂತೆ ‘ಇವ ನಮ್ಮವ’ ಎಂಬ ಭಾವದಿಂದ ಸಮಾಜವನ್ನು ಕಟ್ಟಬೇಕಾಗಿದೆ, ಮುನ್ನಡೆಸಬೇಕಾಗಿದೆ. ಮಹಾಸಭೆಯು ಜಯಂತಿ ಉತ್ಸವದ ಒಮ್ಮತದ ಆಚರಣೆಗೆ ಬದ್ಧವಾಗಿದೆ. ಈಗಾಗಲೇ ಮಹಾಸಭೆಯು ಬಸವಣ್ಣನವರ ಕಂಚಿಮೂರ್ತಿಯನ್ನು ಸೊಲ್ಲಾಪುರದಲ್ಲಿ ಸಿದ್ದಪಡಿಸಿದ್ದು ಶೀಘ್ರವಾಗಿ ಬಸವವೃತ್ತದಲ್ಲಿ ಪ್ರತಿಷ್ಠಾಪನೆಗೊಳಿಸಲಿದೆ ಎಂದು ಹೇಳಿದರು. 

ಜಾಗತಿಕ ಲಿಂಗಾಯತ ಮಹಾಸಭೆ ಅಧ್ಯಕ್ಷರಾದ ಬಸವರಾಜ ರೊಟ್ಟಿಯವರು ಮಾತನಾಡುತ್ತ ಪ್ರತಿವರ್ಷ ನಾವೆಲ್ಲ ಬೇರೆ ಬೇರೆ ಸಂಘಟನೆಗಳ ಅಡಿಯಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಿದ್ದು ಅದಕ್ಕೊಂದು ಸಾರ್ವಜನಿಕ ಸ್ಪರ್ಶ ಬರುತ್ತಿಲ್ಲ. ನಮ್ಮ ಸಮಾಜದೊಡ್ಡದು ಆದರೆ ಸಂಘಟನೆಯ ಕೊರತೆಯಿಂದ ಬಸವಣ್ಣನವರ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ವಿಫಲರಾಗುತ್ತದ್ದೇವೆ. ಸಮಾಜದ ಸಾಂಘಿಕಶಕ್ತಿಯನ್ನು ಉಳಿಸಿಕೊಳ್ಳಬೇಕಾದರೆ ಬಸವ ಜಯಂತಿಯನ್ನು ಒಂದೇ ವೇದಿಕೆಯ ಮೇಲೆ ಆಚರಿಸೋಣ. ಇದು ಸಮಸ್ತ ಹಿರಿಯ ಅನಿಸಿಕೆಯೂ ಆಗಿದೆ. ಜಿಲ್ಲೆಯ ಹಾಗೂ ಗ್ರಾಮೀಣ ಭಾಗಗಳ ಸಮಸ್ತ ಬಸವಭಕ್ತರನ್ನು ಒಂದೆಡೆಗ ಕರೆತರುವ ಕಾರ್ಯವನ್ನು ಮಾಡುವುದು ಅಗತ್ಯವೆಂದು ಹೇಳಿದರು. 

ಲಿಂಗಾಯತ ಮುಖಂಡರಾದ ಶಂಕರ ಗುಡಸ ಅವರು ಮಾತನಾಡುತ್ತ, ನಮ್ಮ ಸಮಾಜಕ್ಕೆ ಒಂದು ಶಿಸ್ತು ಇಲ್ಲದಿದ್ದರೆ ಸಂಘಟನೆ ಅಸಾಧ್ಯ. ಬಸವಪಥ ಸಮಾನತೆಯ ತತ್ತ-್ವಸಿದ್ಧಾಂತದ ಮೇಲೆ ರೂಪಿತಗೊಂಡಂತಹದು. ಒಳಗಿನ ಸಂಘರ್ಷಗಳನ್ನು ತೊರೆದು ನಾವೆಲ್ಲ ಒಂದಾಗಿ ಜಯಂತಿ ಉತ್ಸವಕ್ಕೆ ಅರ್ಥಕಲ್ಪಿಸಬೇಕು. ಲಿಂಗಾಯತ ಸಮಾಜದ ದ್ವೀಪವಾಗುವುದು ತರವಲ್ಲವೆಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಅಶೋಕ ಮಳಗಲಿ, ಅಶೋಕ ಬೆಂಡಿಗೇರಿ, ಚಂದ್ರಶೇಖರ ಬೆಂಬಳಗಿ, ರಮೇಶ ಕಳಸಣ್ಣನವರ, ಸೋಮಲಿಂಗ ಮಾವಿನಕಟ್ಟಿ, ಬಾಲಚಂದ್ರ ಬಾಗಿ, ಶಂಕರ ಪಟ್ಟೇದ, ಸರೋಜನಿ ನಿಶಾನದಾರ, ಅರುಣಾ ಖಡಬಡಿ, ಕಿರಣ ಅಗಡಿ, ಪಂಚಾಕ್ಷರಿ ಚೊಣ್ಣದ, ಬೆಂಬಳಗಿ, ಮುರುಗೇಶ ಪಾಟೀಲ, ಅಜಂನಾ ಕಿತ್ತೂರ, ಆನಂದ ಗುಡಸ, ಸೂರ್ಯಕಾಂತ ಭಾಂವಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.