ವಿಜಯಪುರ 07: ಮಾನವ ಸಂಕಟ ಮತ್ತು ದುಃಖಗಳಿಗೆ ಬಸವಣ್ಣನವರ ವಚನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ಸಾಹಿತಿ ಮತ್ತು ಸಿಂಡಿಕೇಟ್ ಸದಸ್ಯ ಡಾ.ಎಸ್.ನಟರಾಜ ಬೂದಾಳು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಮತ್ತು ವಿಶ್ವಗುರು ಬಸವೇಶ್ವರರ 892ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಮುಖ್ಯ ಉದ್ದೇಶವಾಗಿತ್ತು. ಈ ಉದಾತ್ತ ಉದ್ದೇಶವನ್ನು ಬುದ್ಧನಲ್ಲಿಯೂ ಹಾಗೂ ಡಾ. ಅಂಬೇಡ್ಕರ್ ಅವರಲ್ಲಿಯೂ ಕಾಣಬಹುದು. ಬಸವಣ್ಣ ಕೇವಲ ಶರಣನಲ್ಲ, ವ್ಯಕ್ತಿಯಲ್ಲ, ಅವರು ಒಂದು ವಿದ್ಯಮಾನ. ಅವರು ಹೆಣ್ಣು ಮಕ್ಕಳ ಧಾರ್ಮಿಕ ಕ್ಷೇತ್ರದ ನಿರಾಕರಣೆ, ಜಾತಿ-ಲಿಂಗ ಭೇದದ ವಿರುದ್ಧ ಹೋರಾಟ, ಅಸ್ಪೃಶ್ಯತೆಯ ನಿರಾಕರಣೆ ಮತ್ತು ಬಾಹ್ಯಾಚಾರದ ತಿರಸ್ಕಾರಕ್ಕೆ ಒತ್ತಡ ಕೊಟ್ಟು ಒಂದು ಶ್ರೇಷ್ಠ ಸಾಮಾಜಿಕ ಚಳವಳಿಗೆ ಉತ್ತೇಜನ ನೀಡಿದರು ಎಂದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಸಮಾಜದ ವೈದ್ಯ, ವಚನಗಳ ಲಿಖಿತ ಸಂವಿಧಾನದ ಶಿಲ್ಪಿ ಬಸವಣ್ಣ. ಸಂಕೋಲೆಗಳನ್ನು ಸೃಷ್ಟಿ ಮಾಡುವ ದುಷ್ಟ ಪ್ರಾಣಿ ಮನುಷ್ಯ ಎಂದು ಹೇಳುತ್ತಾ, ಸ್ತ್ರೀ ಸಮಾನತೆಗಾಗಿ 12ನೇ ಶತಮಾನದಲ್ಲಿ ಹೋರಾಟ ಮಾಡಿ ಮಹಿಳಾ ವಿವಿ ಸ್ಥಾಪನೆಗೆ ಬಸವಣ್ಣ ಕಾರಣರಾದರು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್.ಚಂದ್ರಶೇಖರ ಮಾತನಾಡಿ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ ಮತ್ತು ಮೂಢನಂಬಿಕೆಗಳ ವಿರುದ್ಧ ಬಸವಣ್ಣನವರು ಹೋರಾಟ ನಡೆಸುತ್ತಾ ಅನುಭವ ಮಂಟಪವನ್ನು ಸ್ಥಾಪಿಸಿದರು. ಪ್ರತಿಯೊಬ್ಬರ ದೇಹದಲ್ಲಿ ಹರಿಯುವ ರಕ್ತ ಒಂದೇ ಎಂಬ ಸತ್ಯವನ್ನು ಒತ್ತಿ ಹೇಳುತ್ತಾ, ಬೇಧಭಾವವಿಲ್ಲದೇ ಎಲ್ಲರೂ ಬಸವಣ್ಣನವರ ಕಾಯಕ ತತ್ವವನ್ನು ಅನುಸರಿಸಬೇಕು ಎಂದರು.
ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಪ್ರೊ.ರಾಜಕುಮಾರ ಪಿ. ಮಾಲೀಪಾಟೀಲ್ ಮಾತನಾಡಿ, ಬಸವಣ್ಣನವರ ವಚನಗಳು ಹಣ್ಣು, ಕಾಯಿ, ಎಲೆಗಳಿಂದ ತುಂಬಿದ ಮರದಂತೆ ಎಲ್ಲ ವರ್ಗದ ಜನರಿಗೆ ನೆರಳಾಗಿ, ಧ್ವನಿ ನೀಡುವ ಪ್ರಜಾಪ್ರಭುತ್ವದ ಬೀಜವಾಗಿವೆ. ಪ್ಲೇಟೋನ ಆದರ್ಶ ರಾಜ್ಯದ ಪರಿಕಲ್ಪನೆಗಳಂತೆಯೇ ಬಸವಣ್ಣನವರ ವಚನಗಳಲ್ಲಿಯೂ ಸಮಾನತೆಯ, ನ್ಯಾಯದ ಮತ್ತು ನೈತಿಕತೆಗಳನ್ನು ಕಾಪಾಡುವ ಬಲವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಬಸವಣ್ಣ, ತನ್ನ ಚಿಂತನೆಗಳ ಮೂಲಕ ಅನುಭವ ಮಂಟಪದ ರೂಪದಲ್ಲಿ ಇತಿಹಾಸದ ಅಪರೂಪದ ದಾಖಲೆಯೊಂದನ್ನು ರಚಿಸಿದರು. ವಿಶ್ವಕ್ಕೆ ಮಾನವತೆ ನೀಡಿದ ದೇಶ ನಮ್ಮದು ಎಂಬ ಹೆಮ್ಮೆಪಡುವ ಸಂಸ್ಕೃತಿಯನ್ನು ಅವರು ರೂಪಿಸಿದರು. ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ಓದಿ ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಅವು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ದಾರಿ ತೋರಿಸುತ್ತವೆ ಎಂದರು.
ವಚನ ಸ್ಪರ್ಧೆಯಲ್ಲಿ ವಿಜೇತರಾದ ಸವಿತಾ ಚಿಗುರಿ, ಲಕ್ಷ್ಮಿ ಕಾತ್ರಾಳ, ಭವಾನಿ ಅಂಗಡಿ, ಐಶ್ವರ್ಯ ಬಿರಾದಾರ ವಿದ್ಯಾರ್ಥಿನಿಯರು ಸನ್ಮಾನದೊಂದಿಗೆ ಬಹುಮಾನ ಪಡೆದರು. ವಿವಿಯ ಪ್ರಾಧ್ಯಾಪಕರಾದ ಡಾ. ಜ್ಯೋತಿ ಅವಟಿ, ವಿಜಯಮಹಾಂತೇಶ ಹೀರೆಮಠ, ಶ್ರೀನಾಥ ಪಾಟೀಲ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಪ್ರೊ.ರಾಜಕುಮಾರ ಪಿ. ಮಾಲೀಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಸ್ನಾತಕ ವಿಭಾಗದ ಪಲ್ಲವಿ ಬಸವ ಗೀತೆ ಹಾಡಿದರು. ದೀಪ ನಿರೂಪಿಸಿದರು. ಡಾ. ಜ್ಯೋತಿ ಅವಟಿ ವಂದಿಸಿದರು.