ಎಲ್ಲ ಸಂವಿಧಾನಗಳ ತತ್ವಸಾರಕ್ಕೆ ಮುನ್ನುಡಿ ಬರೆದವರು ಬಸವೇಶ್ವರರು: ವಾಲಿಕಾರ

Basaveshwara wrote the preamble to the principles of all constitutions: Valikara

ಸಿಂದಗಿ 06: ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಬಗ್ಗೆ ಸಮಾಜದ ಎಲ್ಲ ವರ್ಗದ ಜನರನ್ನು ಆಹ್ವಾನಿಸಿ ಚರ್ಚಿಸಿದರು ಹಾಗೂ ಎಲ್ಲ ಸಂವಿಧಾನಗಳ ತತ್ವಸಾರಕ್ಕೆ ಮುನ್ನುಡಿ ಬರೆದರು ಎಂದು ಬಿ.ಎಲ್‌.ಡಿ.ಇ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ರವಿಚಂದ್ರ ವಾಲಿಕಾರ ಹೇಳಿದರು. 

ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್‌.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಗಜ್ಯೋತಿ ಬಸವೇಶ್ವರವರ 892ನೇ ಜಯಂತಿಯ ಸ್ಮರಣಾರ್ಥ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ ಕುರಿತು ಹಮ್ಮಿಕೊಳ್ಳಲಾದ ಒಂದು ದಿನದ ಉಪನ್ಯಾಸದಲ್ಲಿ ಮಾತನಾಡಿದರು.  

ಪಟ್ಟಣದ ಎಚ್‌.ಜಿ. ಪ.ಪೂ ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಮಾತನಾಡಿ, ಇಂದಿನ ಯುವಕರು ಬಸವಣ್ಣನವರ ವಿಚಾರ ಧಾರೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.  

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, 12ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ಜಾತಿ, ಮತ, ಲಿಂಗ ಭೇದ ಭಾವವನ್ನು ತೊಡೆದು ಹಾಕಲು ಅನುಭವ ಮಂಟಪವನ್ನು ಚರ್ಚಿಸುವ ವೇದಿಕೆಯಾಗಿ ಬಳಸಿಕೊಂಡರು ಎಂದು ಹೇಳಿದರು.  

ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಬಿ.ಡಿ. ಮಾಸ್ತಿ, ಸಮಾಜಶಾಸ್ತ್ರ ಅತಿಥಿ ಉಪನ್ಯಾಸಕಿ ಸುರೇಖಾ ಚವ್ಹಾಣ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ಎಮ್‌. ಮನಗೂಳಿ, ಪ್ರೊ. ಎಸ್‌.ಎಮ್‌. ಬಿರಾದಾರ, ಪ್ರೊ. ಜಿ.ಜಿ.ಕಾಂಬಳೆ, ಪ್ರೊ. ಎಸ್‌.ಕೆ. ಹೂಗಾರ ಮತ್ತು ಡಾ. ಅಂಬರೀಶ ಬಿರಾದಾರ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕ ಅಮೀತ ಈಳಗೇರ ನಿರೂಪಿಸಿದರು. ಉಪನ್ಯಾಸಕಿ ಗೀತಾ ಮುರಗಾನೂರ ಸ್ವಾಗತಿಸಿ ಪರಿಚಯಿಸಿದರು. ಡಾ. ಆರತಿ ಅಳಗುಂಡಗಿ ವಂದಿಸಿದರು.