ಲೋಕದರ್ಶನ ವರದಿ
ಬಳ್ಳಾರಿ 18: ಜಿಲ್ಲಾ ಕೇಂದ್ರದಲ್ಲಿ ಇದೇ ಜನವರಿ 26 ರಂದು ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗಣರಾಜ್ಯೋತ್ಸವ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ಸಮಾರಂಭ ಜ.26 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಸಮಾಂಭಕ್ಕೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಅಂದು ಕ್ರೀಡಾಂಗಣದಲ್ಲಿ ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಎನ್ಸಿಸಿ ಸೇರಿದಂತೆ ವಿವಿಧ ತಂಡದಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ. ವಿವಿಧ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ದಿನಾಚರಣೆಯ ಅಂಗವಾಗಿ ಸ್ವಾಗತ ಸಮಿತಿ, ಪರೇಡ್ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಪರೇಡ್ ಸಮಿತಿಯವರು ಆಕರ್ಷಕ ಪಥಸಂಚಲನ ನಡೆಸುವಂತಾಗಲು ಸೂಕ್ತ ತಂಡಗಳನ್ನು ನೇಮಿಸಿ, ಆಯ್ಕೆ ಆದವರಿಗೆ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಪೂರ್ವಪ್ರದರ್ಶನ ನಡೆಸಬೇಕು. ಪೂರ್ವಪ್ರದರ್ಶನಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಂಜೆ 6 ಗಂಟೆಗೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ವಿದ್ಯಾಥರ್ಿಗಳಿಂದ ದೇಶಭಕ್ತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದಕ್ಕಾಗಿ ಸಾಂಸ್ಕೃತಿಕ ಸಮಿತಿಯು ಉತ್ತಮ ತಂಡಗಳನ್ನು ಆಯ್ಕೆ ಮಾಡಬೇಕು. ಬೆಳಗಿನ ಕಾರ್ಯಕ್ರಮಕ್ಕೆ ಕ್ರೀಡಾಂಗಣವನ್ನು ಸಮರ್ಪಕವಾಗಿ ಸಜ್ಜುಗೊಳಿಸಬೇಕು. ಕ್ರೀಡಾಂಗಣ ಹಾಗೂ ರಂಗಮಂದಿರದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದ ಅವರು ಮುಜರಾಯಿ ಇಲಾಖೆಯವರು ಅಂದು ಸಂಬಂಧಿಸಿದ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಕೈಗೊಳ್ಳಬೇಕು. ನಗರದ ಎಲ್ಲ ಸಕರ್ಾರಿ ಕಟ್ಟಡಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ತೋಟಗಾರಿಕೆ ಇಲಾಖೆಯವರು ಕ್ರೀಡಾಂಗಣ ವೇದಿಕೆ ಹಾಗೂ ರಂಗಮಂದಿರದ ವೇದಿಕೆ ಅಲಂಕಾರ ಮಾಡಬೇಕು. ಕ್ರೀಡಾಂಗಣಕ್ಕೆ ಹಾಗೂ ರಂಗಮಂದಿರಕ್ಕೆ ಮಕ್ಕಳನ್ನು ಕರೆತರಲು ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು. ಉತ್ತಮ ಸೇವೆ ಸಲ್ಲಿಸಿದ ನೌಕರರು, ಅಧಿಕಾರಿಗಳಿಗೆ ಸವರ್ೋತ್ತಮ ಸೇವಾ ಪ್ರಶಸ್ತಿ ನೀಡಲಾಗುವುದು. ಪಥ ಸಂಚಲನದಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ಅಂದು ನಗರದ ಹೆಚ್.ಆರ್. ಗವಿಯಪ್ಪ ಸರ್ಕಲ್ನಲ್ಲಿ ವಿಶೇಷವಾಗಿ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾರ್ಯಕ್ರಮದ ಯಶಸ್ವಿಗೆ ರಚಿಸಿರುವ ವಿವಿಧ ಉಪಸಮಿತಿಗಳು ಜ.23 ರೊಳಗಾಗಿ ಸಭೆಯನ್ನು ಕೈಗೊಂಡು, ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಯಾವುದೇ ಅಧಿಕಾರಿ, ಸಿಬ್ಬಂದಿಗಳು ಸಮಾರಂಭಕ್ಕೆ ಗೈರುಹಾಜರಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.