ಬೆಳಗಾವಿ: ಡಿಸೆಂಬರ್ 13 :ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ಗುರುವಾರ ಸದನದಲ್ಲಿ ಹೇಳಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆ ಸದಸ್ಯ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರು ಪ್ರಶ್ನೆಗೆ ಉತ್ತರಿಸಿ ಬೆಣ್ಣೆಹಳ್ಳ ಜಲಾಯಶ ಪ್ರದೇಶ 5048.00 ಚದರ ಕಿ.ಮೀ ಹಾಗೂ ತುಪ್ಪರಿಹಳ್ಳದ ಜಲಾನಯನ ಪ್ರದೇಶ 1123.57 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಣ್ಣೆಹಳ್ಳದಿಂದ ಹಾಗೂ ತುಪ್ಪರಿಹಳ್ಳದಿಂದ 14.20 ಟಿಎಂಸಿ ನೀರಿನ ಹರಿವನ್ನು ಅಂದಾಜಿಸಲಾಗಿದೆ. ಲಭ್ಯವಾಗುವ 2.247 ಟಿಎಂಸಿ ನೀರನ್ನು ಬಳಸಿಕೊಂಡು ಕುಡಿಯುವ ನೀರು ಹಾಗೂ ನೀರಾವರಿಗಾಗಿ ಬಳಕೆ ಮಾಡಲು ಆರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ನೀರಿನೊಂದಿಗೆ ಕೃಷ್ಣಾ ಕಣವೆಯ ನೀರಿನ ಹಂಚಿಕೆಯಲ್ಲಿ 2.20 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಯೋಜಿಸಿಕೊಳ್ಳಲಾಗಿದೆ ಎಂದು ಶಿವಕುಮಾರ್ ಅವರು ಹೇಳಿದರು.
ಸದಸ್ಯರಾದ ಜಗದೀಶ ಶೆಟ್ಟರ್, ಬಸವರಾಜ ಬೋಮ್ಮಯಿ ಅವರು ಮಾತನಾಡಿ ನೀರಾವರಿ ತಜ್ಞರಾದ ಪರಮಶಿವಯ್ಯ ಅವರ ವರದಿಯ ಅಂಶಗಳನ್ನು ಪರಿಗಣಿಸಬೇಕು. ಬೆಣ್ಣೆಹಳ್ಳ ಯೋಜನೆಗೆ ಅನುದಾನ ಹೆಚ್ಚಳ ಮಾಡಬೇಕು. ಗೋದಾವರಿ, ಕೃಷ್ಣಾ ಹಾಗೂ ಕಾವೇರಿ ನದಿ ಜೋಡಣೆ ಕಾರ್ಯಗಳನ್ನು ಕೈಗೊಳ್ಳಬೇಕು. ಇದರಿಂದ ಮಲಪ್ರಭಾ ಜಲಾಶಯಕ್ಕೆ ನೀರು ತುಂಬಿಸಲು ಅನುಕೂಲವಾಗಲಿದೆ. ಈ ಭಾಗದ ಜನ-ಜನುವಾರುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದ ಹೂಳು ಎತ್ತುವ ಹಾಗೂ ನೀರಿನ ಬಳಕೆ ಕುರಿತಂತೆ ರಚಿಸಲಾದ ನೀರಾವರಿ ತಜ್ಞರಾದ ಪರಮಶಿವಯ್ಯ ಅವರ ವರದಿಯನ್ನು ಈಗಾಗಲೇ ಅಧ್ಯಯನ ಮಾಡಲಾಗಿದೆ. ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಪರಮಶಿವಯ್ಯ ಅವರ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.