ಲೋಕದರ್ಶನ ವರದಿ
ಜಗಜ್ಯೋತಿ ಬಸವಣ್ಣನವರ ಜೀವನ ಚರಿತ್ರೇ. ಗೋಪಾಲ ಚಪಣಿ
ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ 30 1134) ರೋಹಿಣಿ ನಕ್ಷತ್ರದಲ್ಲಿ ಜನಿಸಿದರು.
ಇವರು ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು.
ಒಂದು ದಿನ (ದಿ. 14ನೇ ಜನವರಿ 1155) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ.
ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು. ಪರಮಾತ್ಮನ ದಿವ್ಯಾನುಭವ ಪಡೆದು, ನವ ಸಮಾಜ ನಿರ್ಮಾಣದ ರೂಪುರೇಷೆಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು ಪ್ರವೇಶಿಸಿದರು.
ಸೋದರ ಮಾವನ ಮಗಳು ನೀಲಾ0ಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು. ಅನುಭವ ಮಂಟಪ ಸ್ಥಾಪಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು.
ಇಂತಹ ಮಹಾನ್ ನೇತಾರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು; ಧರ್ಮಪಿತರು, ಮಂತ್ರಪುರುಷರು. 62 ವರ್ಷ 3 ತಿಂಗಳು 2 ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ 7 1196) ಉರಿಯುಂಡ ಕಪುರದಂತೆ ಲಿಂಗೈಕ್ಯರಾದರು.
ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ " ಶಿವಶರಣ " ರೆಂದು ಕರೆದರು.
ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ 892 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ.