ವಿಜೃಂಭಣೆಯಿಂದ ಬ್ರಹ್ಮಜಟ್ಟಿಂಗೇಶ್ವರ ಜಾತ್ರೆ
ತಾಳಿಕೋಟೆ 31: ತಾಲ್ಲೂಕಿನ ಭಂಟನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಪಾಡ್ಯದ ದಿನದಂದು ಬ್ರಹ್ಮಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವವು ಭಾನುವಾರ ವಿಜೃಂಭಣೆಯಿಂದ ಜರುಗಿತು. ಗಂಗಸ್ಥಳಕ್ಕೆ ನಾರಾಯಣಪುರದ ಬಳಿಯ ಛಾಯಾಭಗವತಿಯ ಆಕಳಭಾವಿಯಲ್ಲಿ ಗಂಗಸ್ಥಳ ಮುಗಿಸಿ ಭಾನುವಾರ ಗ್ರಾಮದ ಪಾದಗಟ್ಟಿಗೆ ತಲುಪಿತು. ಅಹೋರಾತ್ರಿ ಜಾಗರಣೆ ನಿಮಿತ್ತ ಶರಣೆ ಕಾಶಿಬಾಯಿ ಅಮ್ಮನವರಿಂದ ಅಧ್ಯಾತ್ಮಿಕ ಪ್ರವಚನ ಜರುಗಿತು. ಆಕಾಶವಾಣಿ ಕಲಾವಿದರಾದ ಗವಾಯಿ ಬಸವರಾಜ ಭಂಟನೂರ ಮತ್ತು ಮಹೇಶ ಭಂಟನೂರ ಅವರಿಂದ ಸಂಗೀತಸೇವೆ ಜರುಗಿತು. ಬಸಯ್ಯಮುತ್ಯಾ ಹಿರೇಮಠ ಅವರಿಂದ ಭಜನೆ, ಡೊಳ್ಳಿನ ಕಲಾವಿದರಿಂದ ಡೊಳ್ಳಿನ ಹಾಡುಗಳು ನಡೆದವು. ಭಾನುವಾರ ಬೆಳಿಗ್ಗೆ ಜೋಡುಪಲ್ಲಕ್ಕಿ ಮೆರವಣಿಗೆಯು ಭಾಜಾಭಜಂತ್ರಿ, ಡೊಳ್ಳುಕುಣಿತ ಸಮೇತ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ತಲುಪಿತು. ಭಕ್ತಾದಿಗಳು ಹರಕೆಯಾಗಿ ಬೇಡಿಕೊಂಡ ಸಕ್ಕರೆಯನ್ನು ದಾರಿಯುದ್ದಕ್ಕೂ ವಿತರಣೆ ಮಾಡುತ್ತ ನಡೆದರು. ಅರ್ಚಕರಾದ ನಾಗಪ್ಪ ಸಿದ್ದಪ್ಪ ಪೂಜಾರಿ ಅಭಿಷೇಕ, ಮಂಗಳಾರತಿ ನಡೆಸಸಿಕೊಟ್ಟರು. ನಂತರ ಭಕ್ತಾದಿಗಳಿಂದ ಕಣಕಾದರತಿ ಮಾಡಿ ದೇವಸ್ಥಾನದಲ್ಲಿ ಬೆಳಗಿದರು. ಉತ್ಸವದಲ್ಲಿ ಪ್ರಮುಖರಾದ ರೇವಣಸಿದ್ದಪ್ಪ ಪೂಜಾರಿ ಮೈಲೇಶ್ವರ, ನಿಂಗಣ್ಣ ದೊಡಮನಿ, ಜೆಟ್ಟೆಪ್ಪ ಬ್ಯಾಕೋಡ, ಸಾಯಬಣ್ಣ ಆಲ್ಯಾಳ, ಕರೆಪ್ಪ ಕೊಂಡಗೂಳಿ, ಶಿವಣ್ಣ ಪೂಜಾರಿ, ಬಂಡೆಪ್ಪ ಮೈಲೇಶ್ವರ, ಬಸವರಾಜ ಹೂಗಾರ, ಶಿವಣ್ಣ ನೀರಲಗಿ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.