ಚಿಕ್ಕೋಡಿ, 06 : ತಾಲೂಕಿನಲ್ಲಿ ಹಾದು ಹೋಗಿರುವ ಸಿಬಿಸಿ ಕಾಲುವೆ ನೀರನ್ನು ಜಿಎಲ್ಬಿಸಿ ಕಾಲುವೆಗೆ ಜೋಡಿಸಿ ಕಾಡಾಪೂರ ಕೆರೆ ತುಂಬಿಸಬೇಕು ಎಂದು ಪ್ರಗತಿಪರ ಯುವ ರೈತ ಅರ್ಜುನ ಗುರುನಾಥ ಒತ್ತಾಯಿಸಿದರು.
ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ ಅವರು, ಪ್ರಸಕ್ತ ವರ್ಷದಲ್ಲಿ ಬಿಸಿಲಿನ ದಗೆ ಹೆಚ್ಚುತ್ತಿದೆ. ಮಾರ್ಚ, ಎಪ್ರೀಲ್ ಮತ್ತು ಮೇ ತಿಂಗಳ ಎರಡನೆ ವಾರ ಆರಂಭವಾದರೂ ಒಂದೂ ಅಡ್ಡ ಮಳೆ ಸುರಿಯುತ್ತಿಲ್ಲ, ಇದರಿಂದ ರೈತಾಪಿ ವರ್ಗ ಸಂಕಷ್ಟ ಎದುರಿಸುತ್ತಿದ್ದಾನೆ. ಸರ್ಕಾರ ಕೂಡಲೇ ಸಿಬಿಸಿ ಕಾಲುವೆ ನೀರನ್ನು ಜಿಎಲ್ಬಿಸಿ ಕಾಲುವೆಗೆ ಸೇರಿಸಿ ಕಾಡಾಪೂರ ಕೆರೆ ತುಂಬಿಸಬೇಕು ಎಂದು ಮನವಿ ಮಾಡಿದರು.
ಕಳೆದ ವರ್ಷದ ಬೇಸಿಗೆಯಲ್ಲಿ ಕೆರೆ ನೀರು ಖಾಲಿಯಾದಾಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಾಡಾಪೂರ ಕೆರೆ ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದರು. ಈ ವರ್ಷ ಕೆರೆ ಖಾಲಿಯಾಗುತ್ತಾ ಬಂದಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ ಪ್ರಿಯಂಕಾ ಜಾರಕಿಹೊಳಿ ದೊಡ್ಡ ಮನಸ್ಸು ಮಾಡಿ ಕಾಡಾಪೂರ ಕೆರೆ ತುಂಬಿಸಬೇಕು. ಇದರಿಂದ ಕೇರೂರ, ಕಾಡಾಪೂರ ಸೇರಿದಂತೆ ಮುಂತಾದ ಹಳ್ಳಿಯ ಜನರಿಗೆ ಅನುಕೂಲವಾಗಿದೆ ಎಂದರು.
ಹಿಡಕಲ್ ಜಲಾಶಯದಿಂದ ಚಿಕ್ಕೋಡಿ ಸಿಬಿಸಿ ಕಾಲುವೆಗೆ ನೀರು ಸರಾಗವಾಗಿ ಬರುತ್ತದೆ. ಜಿಎಲ್ಬಿಸಿ ಕಾಲುವೆ ನೀರು ರಾಯಬಾಗ ತಾಲೂಕು ಸುತ್ತುವರೆದು ಬರುತ್ತದೆ. ಹೀಗಾಗಿ ಸಿಬಿಸಿ ಕಾಲುವೆ ನೀರನ್ನು ಜಿಎಲ್ಬಿಸಿ ಕಾಲುವೆಗೆ ಜೋಡಿಸಿದರೆ ಕಾಡಾಪೂರ ಕೆರೆ ತುಂಬಿಸಲು ಅನುಕೂಲವಾಗುತ್ತದೆ. ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ರೈತರ ಜಾನುವಾರಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅರ್ಜುನ ಗುರುನಾಥ ಒತ್ತಾಯಿಸಿದರು.