ಬೆಳಗಾವಿ 13: ಜೈನ ಧರ್ಮ ಗುರುಗಳಾದ ಆಚಾರ್ಯ ಕುಂಥುಸಾಗರ ಮುನಿಗಳು ಹಾಗೂ ಅವರ ಸಂಘ ಇಂದು ರವಿವಾರ ಬೆಳಿಗ್ಗೆ ಬೆಳಗಾವಿ ನಗರವನ್ನು ಪ್ರವೇಶ ಮಾಡಿದರು.
ಇತ್ತಿಚಿಗೆ ಶ್ರವಣಬೆಳಗೊಳ ಮತ್ತು ಸೊಂದಾ ವ್ಮಠದ ವಿಹಾರದಲ್ಲಿದ್ದ ಆಚಾರ್ಯ ಶ್ರೀಗಳು ಇದೀಗ ಮಹಾರಾಷ್ಟ್ರದ ಕೊಲ್ಲಾಪೂರ ಪಟ್ಟಣಕ್ಕೆ ವಿಹಾರ ನಡೆಸುತ್ತಿದ್ದಾರೆ. ಈ ವಿಹಾರದ ಅಂಗವಾಗಿ ಇಂದು ಬೆಳಿಗ್ಗೆ ಆಚಾರ್ಯ ಕುಂಥುಸಾಗರ ಮುನಿಗಳು ಮತ್ತು ಅವರ ಜೊತೆಯಲ್ಲಿ ಅರ ಸಂಘದಲ್ಲಿನ ಮುನಿಗಳು ಬೆಳಗಾವಿ ನಗರವನ್ನು ಪ್ರವೇಶ ಮಾಡಿದರು.
ಬೆಳಗಾವಿಯ ಜೈನ ಸೇವಾ ಸಂಘದ ಯುವಕರು ಶ್ರಿಗಳನ್ನು ಸುರಕ್ಷಿತವಾಗಿ ಪಾದಯಾತ್ರೆಯ ಮೂಲಕ ಹಲಗಾ ಗ್ರಾಮದಿಂದ ಬೆಳಗಾವಿಗೆ ಕರೆದುಕೊಂಡು ಬಂದರು. ಇಲ್ಲಿಯ ಧರ್ಮನಾಥ ಭವನದ ಬಳಿವಿರುವ ಧರ್ಮನಾಥ ಮಂದಿರದಲ್ಲಿ ಜೈನ ಸಮಾಜದ ಬಾಂಧವರು ಮುನಿಗಳನ್ನು ಭಕ್ತಿಭಾವದಲ್ಲಿ ಬರಮಾಡಿಕೊಂಡರು. ಶಾಸಕ ಅಭಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಕೆಪಿ.ಸಿ.ಸಿ ಕಾರ್ಯದರ್ಶಿ ಸುನಿಲ ಹನಮಣ್ಣವರ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಸಹ ಕಾರ್ಯದರ್ಶಿ ಯಲ್ಲಪ್ಪ ಮೇಲಿನಮನಿ, ಮೊದಲಾದವರು ಆಚಾರ್ಯ ಶ್ರೀಗಳ ಪಾದಪೂಜೆ ನೇರವೇರಿಸಿ ಶ್ರೀಗಳನ್ನು ಬರಮಾಡಿಕೊಂಡರು.
ತದನಂತರ ಶ್ರೀಗಳು ಭಗವಂತನ ಪಂಚಾಮೃತ ಅಭಿಷೇಕದ ಬಳಿಕ ಆಹಾರ ಚರ್ಯೆ ಮುಗಿಸಿಕೊಂಡು ಮಧ್ಯಾಹ್ನ ಕೊಲ್ಲಾಪೂರಕ್ಕೆ ತಮ್ಮ ವಿಹಾರ ಕೈಗೊಂಡರು. ಜೈನ ಸೇವಾ ಸಂಘದ ಅಧ್ಯಕ್ಷ ಸಚಿನ ಪಾಟೀಲ ಹಾಗೂ ಪದಾಧಿಕಾರಿಗಳು ಹಾಗೂ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.