ಮಾಸ್ಕೋ, ಅಕ್ಟೋಬರ್ 26: ಗಾಜಾ ಗಡಿ ಪ್ರದೇಶದ ಬಳಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್)ಯೊಂದಿಗೆ ಉಂಟಾದ ಘರ್ಷಣೆಯಲ್ಲಿ ಎಂಭತ್ತೊಂದು ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡವರಲ್ಲಿ 11 ಅಪ್ರಾಪ್ತ ಮಕ್ಕಳು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ಕೂಡ ಸೇರಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ಡಬ್ಲ್ಯುಎಎಫ್ಎ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ಜೀವಂತ ಮದ್ದುಗುಂಡುಗಳಿಂದ 37 ಜನರು ಗಾಯಗೊಂಡಿದ್ದಾರೆ. ರಬ್ಬರ್ ಗುಂಡುಗಳು 29 ಜನರ ಮೇಲೆ ತಾಗಿ ಗಾಯಗೊಂಡಿದ್ದಾರೆ. ಡಜನ್ಗಟ್ಟಲೆ ಜನರು ಅಶ್ರುವಾಯು ಉಸಿರಾಡಿದ್ದರಿಂದ ಅಸ್ವಸ್ಥರಾಗಿದ್ದಾರೆ ಎಂದು ಅದು ವರದಿ ಮಾಡಿದೆ. ಸಾಪ್ತಾಹಿಕ ಇಸ್ರೇಲಿ ವಿರೋಧಿ ಪ್ರತಿಭಟನೆ ಶುಕ್ರವಾರ ಸತತ 80 ನೇ ಬಾರಿಗೆ ನಡೆದವು. ಫ್ಯಾಲೆಸ್ತೀನಿಯನ್ನರು ಮಾರ್ಚ್ 2018ರ ಕೊನೆಯಲ್ಲಿ ಗ್ರೇಟ್ ಮಾರ್ಚ್ ಆಫ್ ರಿಟರ್ನ್ ಎಂದು ಕರೆಯಲ್ಪಡುವ ಅಭಿಯಾನವನ್ನು ಪ್ರಾರಂಭಿಸಿದರು. ಸಾಮಾನ್ಯವಾಗಿ ಪ್ರತಿಭಟನೆಯೊಂದಿಗೆ ನಡೆಯುವ ಘರ್ಷಣೆಯಿಂದ, ಡಜನ್ಗಟ್ಟಲೆ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.