ಪಕ್ಷ ತೆಗೆದುಕೊಳ್ಳುವ ನಿಧರ್ಾರಕ್ಕೆ ಬದ್ಧ: ಶಾಸಕ ಬಿ. ಶ್ರೀರಾಮುಲು

ಬಳ್ಳಾರಿ 2: ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠರು ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದು, ಅವರು ಸಚಿವ ಸ್ಥಾನದ ಬಗ್ಗೆ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ತಾವು ಬದ್ಧ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹದ್ದೇ ಜಿಲ್ಲೆಗೆ ಸಚಿವ ಸ್ಥಾನ ಎಂಬುದಿಲ್ಲ. 

   ಯಾರಿಗೆ ಯಾವ ಸ್ಥಾನವನ್ನು ಎಲ್ಲಿ, ಯಾವಾಗ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನಾನು ಇಡೀ ರಾಜ್ಯಕ್ಕೆ ಸೀಮಿತನಾಗಿರುವವನು. ನನ್ನಂತಹ ನಾಯಕರು ಪಕ್ಷದಲ್ಲಿ ಬಹಳಷ್ಟು ಇದ್ದಾರೆ ಎಂದರು. ನೀವು ಉಪಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಮುಲು ಉತ್ತರಿಸಲು ಹಿಂದೇಟು ಹಾಕಿದರು.  

   ಕಾಂಗ್ರೆಸ್ ನಿಂದ ಸ್ಪರ್ದಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಅನರ್ಹರಿಗೂ ಪಕ್ಷದಲ್ಲಿ ಸಚಿವ ಸ್ಥಾನ ನೀಡಬೇಕಿದೆ.ಸರ್ಕಾರ ರಚನೆಗೆ ಅವರು ಸಹಾಯ ಮಾಡಿದಂತೆ ಈಗ 17 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೂ ಅವರು ಪಕ್ಷಕ್ಕೆ ಸಹಾಯ ಮಾಡಲಿದ್ದಾರೆ. 

   ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಆರು  ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಬಾವುಟ ಹಾರಿಸಿ ಕಾಂಗ್ರೆಸ್ ಜಿಲ್ಲೆಯಲ್ಲಿ  ಧೂಳಿಪಟವಾಗುವಂತೆ ಮಾಡಿತ್ತು. 

ಹೀಗಾಗಿ ಜಿಲ್ಲೆಯಲ್ಲಿ ಅರ್ಧ ಡಜನ್ ಗೂ ಹೆಚ್ಚು  ಸಚಿವಾಕಾಂಕ್ಷಿಗಳಿದ್ದು, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ  ಕೆ.ಪೂರ್ಣಿಮಾ,  ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ  ಶಾಸಕ ಚಂದ್ರಪ್ಪ ಸೇರಿದಂತೆ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೆಸರುಗಳು  ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿ ಮೊಳಕಾಲ್ಮೂರಿನಲ್ಲಿ ಗೆಲುವು ಸಾಧಿಸಿದ  ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ದೊರಕಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು.