ಒಳ ಮೀಸಲಾತಿ ಜನಗಣತಿ ಕಾರ್ಯ ಕೊನೆಯ ದಿನಾಂಕ ವಿಸ್ತರಣೆಗೆ ಆಗ್ರಹ

Demand for extension of the last date for internal reservation census

ಜಮಖಂಡಿ 24: ರಾಜ್ಯ ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ಜನಗಣತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ತಾಲೂಕಾ ಆಡಳಿತ, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ಒಳಮೀಸಲಾತಿ ಜನಗಣತಿ ಕಾಟಾಚಾರಕ್ಕೆ ಮಾಡುತ್ತಿದ್ದಾರೆ. ಇದರಿಂದ ಜನ ವಂಚಿತರಾಗುತ್ತಿದ್ದಾರೆ ಎಂದು ಚಲವಾದಿ ಮಹಾಸಭಾ ತಾಲೂಕಾ ಘಟಕ ಅಧ್ಯಕ್ಷ ಶಶಿಕಾಂತ ದೊಡಮನಿ ಆರೋಪಿಸಿದರು.  

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ಮನೆಮನೆಗೆ ಭೇಟಿ ನೀಡಿ ಜನಾಂಗದವರನ್ನು ಚರ್ಚಿಸಿದಾಗ ಕೆಲವರ ಆಧಾರ ಕಾರ್ಡ ಇಲ್ಲದ ಕಾರಣ ಜನಗಣತಿ ಮಾಡಿಕೊಂಡಿಲ್ಲ. ನೋಡಲ್ ಅಧಿಕಾರಿಗಳಿಗೆ ನಿಖರವಾದ ಮಾಹಿತಿ ಆಯೋಗ ತಿಳಿಸದೆ ಇರುವ ಕಾರಣ ಒಳಮೀಸಲಾತಿ ಜನಗಣತಿ ಸರಿಯಾಗಿ ಆಗುತ್ತಿಲ್ಲ ಇದರಿಂದ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.  

ಕೆಲ ಮಕ್ಕಳ ಆಧಾರ ಕಾರ್ಡ ಇಲ್ಲದೆ ಮತ್ತು ಚುನಾವಣಾ ಪಟ್ಟಿಯಲ್ಲಿ ಕೆಲವರ ಹೆಸರು ಇಲ್ಲದ ಕಾರಣ ಅವರ ಹೆಸರು ನೊಂದಾಯಿಸಿಕೊಳ್ಳುತ್ತಿಲ್ಲ. ಪ್ರತಿ ಗ್ರಾಮದಲ್ಲಿ 50 ರಿಂದ 100 ಜನ ಜನಗಣತಿಯಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಗಣತಿಯಿಂದ ವಂಚಿತರಾಗಿದ್ದಾರೆ ಇದರ ಬಗ್ಗೆ ಸರ್ಕಾರ ಮತ್ತು ಮೇಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು ಮತ್ತು ಮೇ 28ರ ಜನಗಣತಿಯ ಕೊನೆಯ ದಿನಾಂಕವನ್ನು ವಿಸ್ತರಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.  

ಒಳ ಮೀಸಲಾತಿ ಜನಗಣತಿಯ ಬಗ್ಗೆ ಉಪವಿಭಾಗಾಧಿಕಾರಿಗಳ ಮತ್ತು ರಾಜ್ಯ ಮೇಲಾಧಿಕಾರಿಗಳ ಸಹಾಯವಾಣಿ ಆಯೋಗದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಿಂದ ಯಾವುದೆ ಸರಿಯಾದ ಉತ್ತರವಿಲ್ಲ ಮತ್ತು ಸರಿಯಾದ ಮಾಹಿತಿ ಇಲ್ಲ ಎಂಬ ಶಬ್ದ ಕೇಳಿ ಬರುತ್ತಿದೆ. ಇದರಿಂದ ಸಮಾಜ ಬಾಂದವರು ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.  

ಶೈಕ್ಷಣಿಕ ವರ್ಷ ಪ್ರಾರಂಭವಾದ ಹಿನ್ನಲೆಯಲ್ಲಿ ಮಕ್ಕಳು ಶಾಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಮತ್ತು ಶಿಕ್ಷಕ ನೋಡಲ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುತ್ತಾರೆ ಆದ್ದರಿಂದ ಅಕ್ಟೋಬರ್ ತಿಂಗಳವರೆಗೆ ಮುಂದುವರಿಸಿ ಜಾತಿಗಣತಿ ಪೂರ್ಣಗೊಳಸಬೇಕು ಎಂದು ಮನವಿ ಮಾಡಿಕೊಂಡರು.  

ಚಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ರವಿ ಬಬಲೇಶ್ವರ ಮಾತನಾಡಿ. ಗ್ರಾಮಕ್ಕೆ ತೆರಳಿದಾಗ ಒಬ್ಬ ನೋಡಲ್ ಅಧಿಕಾರಿಗಳು ಬೇಟಿಯಾಗಲಿಲ್ಲ ಮತ್ತು ದೂರವಾಣಿ ಸಂಪರ್ಕಕ್ಕೆ ಬರಲಿಲ್ಲ ಇದು ಕಾಟಾಚಾರಕ್ಕೆ ಎಂಬುವದು ಅರ್ಥವಾಗುತ್ತದೆ.ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು ಪ್ರತೇಕ ವಿಭಾಗ ಮಾಡಿ ಜನಗಣತಿ ಕಾರ್ಯಕ್ಕೆ ಅನುಕೂಲ ಕಲ್ಪಿಸಬೇಕು ಮತ್ತು ಜಾಗೃತಿಗಾಗಿ ಢಂಗುರ ಸಾರಬೇಕು. ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.  

ಸುದ್ದಿಗೊಷ್ಠಿಯಲ್ಲಿ ಗೌರವಾಧ್ಯಕ್ಷ ಸುರೇಶ ಮೀಸಿ, ಸಂಚಾಲಕ ವಕೀಲ ದೊಡಮನಿ, ಸಂಘನಾ ಸಂಚಾಲಕ ಸಾಗರ ಕಾಂಬಳೆ ಇದ್ದರು.