ಅಖಂಡ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿಗೆ ಸೇರಿಸಲು ಆಗ್ರಹ
ವಿಜಯಪುರ 01: ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿ ಅಡಿ ಬಿಟ್ಟು ಹೋದ ಪ್ರದೇಶವಾದ ಅಖಂಡ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ವ್ಯಾಪ್ತಿಗೆ ್ತ ಸೇರಿಸುವ ಮೂಲಕ ಅನ್ಯಾಯಕ್ಕೊಳಗಾದ ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕೆಂದು ರೈತ ಭಾರತ ಪಕ್ಷ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ, ನಾರಾಯಣ ಸ್ವಾಮಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರೈತ ಭಾರತ ಪಕ್ಷ ಕರ್ನಾಟಕದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆ ರಾಜಾಡಳಿತ ಕಾಲದಲ್ಲಿ ಹೈದ್ರಾಬಾದ್ ನಿಜಾಮನ ಆಡಳಿತದಲ್ಲಿತ್ತು ಎಂಬುವುದಕ್ಕೆ ಸರ್ಕಾರದಿಂದ ಪ್ರಕಟಗೊಂಡ ಗೆಜಿಟಿಯರ್‌ನಲ್ಲಿ ದಾಖಲಾಗಿದೆ. ಕ್ರಿ.ಶ. 1744ರಲ್ಲಿ ಹೈದ್ರಾಬಾದಿನ ನಿಜಾಮನು ಕೃಷ್ಣೆಯ ಉತ್ತರದ ಭಾಗದ ಆಡಳಿತದ ಹೊಣೆಯನ್ನು ನಾಶಿರ ಜಂಗನಿಗೂ, ದಕ್ಷಿಣದ ಬಾದಾಮಿ ಬಾಗಲಕೋಟೆ ಗ್ರಾಮದ ಸವಣೂರಿನ ನವಾಬನ ಆಡಳಿತಕ್ಕೆ ನೀಡಿದ್ದ ಕ್ರಿ.ಶ. 1746ರಲ್ಲಿ ಸವಣೂರಿನ ನವಾಬನು ಮರಾಠಾ ಪೇಶ್ವೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸದರಿ ಪ್ರದೇಶಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದರ ಕುರಿತು ಅಧಿಕೃತ ದಾಖಲೆಗಳಿವೆ. ಕಲ್ಯಾಣರ ಚಾಲುಕ್ಯರ ಕಾಲದಿಂದ ವಿಜಯಪುರ ಜಿಲ್ಲೆ ಕಲ್ಯಾಣ ನಾಡಿನಲ್ಲಿಯೇ ಇತ್ತು. ಈಗಾಗಲೇ ಸಾರಿಗೆ ವ್ಯವಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಡಿ ಇದೆ. ನ್ಯಾಯಾಂಗ ವ್ಯವಸ್ಥೆ ಕೂಡಾ ಕಲ್ಬುರ್ಗಿ ಉಚ್ಛ ನ್ಯಾಯಾಲಯದಡಿ ಬರುತ್ತದೆ. ಹೀಗಿದ್ದರೂ ಕೂಡಾ, ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ಸೇರಿಸದೆ ಇರುವುದು ಐತಿಹಾಸಿಕ ಪ್ರಮಾದವಾಗಿದೆ ಎಂದು ತಿಳಿಸಲಾಗಿದೆ.
ನಿಜಾಮನ ಆಡಳಿತದಲ್ಲಿ ಇಲ್ಲದೆ ಇರುವ ಬಳ್ಳಾರಿ ಜಿಲ್ಲೆಯನ್ನು (ವಿಜಯನಗರ ಸೇರಿ) 371 ಜೆ ಮೀಸಲಾತಿಯಡಿ ಸೇರಿಸಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆ ಕೂಡಾ ಹಿಂದುಳಿದ ಪ್ರದೇಶವಾಗಿದ್ದು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಇಲ್ಲಿನ ಜನಸಮೂಹವು ಅತ್ಯಂತ ಹಿಂದುಳಿದಿರುತ್ತಾರೆ.
ನಮ್ಮ ಅಖಂಡ ವಿಜಯಪುರ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿ ಇದ್ದ ಬಗ್ಗೆ ಅಧಿಕೃತ ಸರ್ಕಾರೆ ದಾಖಲೆಗಳಿದ್ದರೂ ಕೂಡಾ 371 ಜೆ ಮೀಸಲಾತಿ ಅಡಿ ಸೇರಿಸದೆ ಇರುವುದರಿಂದ ಜಿಲ್ಲೆಗೆ ಅನ್ಯಾಯವಾಗಿದೆ. ಅಖಂಡ ವಿಜಯಪುರ ಜಿಲ್ಲೆಗೆ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ನೀಡುವವರೆಗೆ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ ಮೀಸಲಾತಿಯ ಸ್ಥಳೀಯ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆ ಹಿಡಿಯಬೇಕು ಎಂದರು.
ಕೂಡಲೇ ತಾವುಗಳು ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿ ಅಡಿ ಬಿಟ್ಟು ಹೋದ ಪ್ರದೇಶವಾದ ಅಖಂಡ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ವ್ಯಾಪ್ತಿಗೆ ್ತ ಸೇರಿಸುವ ಮೂಲಕ ಅನ್ಯಾಯಕ್ಕೊಳಗಾದ ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕೆಂದು ರೈತ ಭಾರತ ಪಕ್ಷ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ದೀಪಕ ಕುಲಕರ್ಣಿ, ಎಂ.ಎ. ಮಾಲಬಾವಡಿ, ಆರ್. ಎಸ್. ನಾಗಶೆಟ್ಟಿ, ಸಿದ್ದಪ್ಪ ಶಿವಪ್ಪ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.