ಬಳ್ಳಾರಿ 28: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ಭರವಸೆಯ ಬೆಳಕು-ಪಂಚ ಗ್ಯಾರಂಟಿ ಯೋಜನೆಗಳು' ಕುರಿತ ಬಳ್ಳಾರಿ ಜಿಲ್ಲೆಯ ಕಿರು ಹೊತ್ತಿಗೆಯನ್ನು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರು ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಯೋಜನೆಗಳು ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ವರ್ಗಕ್ಕೂ ತಲುಪುತ್ತಿವೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರವು ದೀನ ದಲಿತರ ಹಾಗೂ ಬಡವರ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದು, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವುದರೊಂದಿಗೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳು, ಯೋಜನೆಗಳಿಂದ ತಮಗೆ ಆದ ಅನುಕೂಲ ಹಾಗೂ ಬದುಕಿಗೆ ನೆರವಾದ ಕುರಿತಂತೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ಫಲಾನುಭವಿಗಳ ಅನಿಸಿಕೆಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶವನ್ನು “ಭರವಸೆಯ ಬೆಳಕು- ಪಂಚ ಗ್ಯಾರಂಟಿ ಯೋಜನೆಗಳು’ ಕಿರುಹೊತ್ತಿಗೆ ಒಳಗೊಂಡಿದೆ.
ಈ ವೇಳೆ ಸಚಿವರ ಆಪ್ತ ಕಾರ್ಯದರ್ಶಿ ಸರ್ಫಾರಾಜ್ ಖಾನ್, ಸಚಿವರ ಮಾಧ್ಯಮ ಸಲಹೆಗಾರ ಎಸ್.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.