ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಮಿತಿ ಸಭೆ
ಬೆಳಗಾವಿ 30: ಸರ್ಕಾರದ ವಿವಿಧ ಯೋಜನೆಗಳಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಸಕಾಲದಲ್ಲಿ ಸೇವೆಗಳು ದೊರೆಯಬೇಕು. ಅರ್ಹ ಫಲಾನುಭವಿಗಳು ವಿವಿಧ ಯೋಜನೆಗಳ ಮೂಲಕ ಬ್ಯಾಂಕ್‌ಗೆ ಅರ್ಜಿಗಳನ್ನು ಸಲ್ಲಿಸಿದಾಗ ಕನಿಷ್ಟ ಪಕ್ಷ ಅರ್ಜಿಯೊಂದಿಗೆ ಅವಶ್ಯಕವಾಗಿ ಬೇಕಾಗುವ ದಾಖಲೆಗಳ ಕುರಿತು ಸೂಕ್ತ ಮಾಹಿತಿ ಒದಗಿಸಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಜ.30) ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಮಿತಿ/ ವಿವಿಧ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಗಳು ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಬಾರದು. ಸರ್ಕಾರದ ಯೋಜನೆಯ ಸೌಲಭ್ಯ ಸಾರ್ವಜನಿಕರಿಗೆ ತಲುಪಬೇಕಾದರೆ ಬ್ಯಾಂಕ್ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬೇರೆಬೇರೆ ರೀತಿಯ ತರಬೇತಿಗಳನ್ನು ಸರ್ಕಾರದಿಂದ ನೀಡಲಾಗುತ್ತಿದ್ದು ಬಡತನ ರೇಖೆಗಿಂತ ಕೆಳಗಿರುವವರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕೆನ್ನುವುದೇ ಇದರ ಉದ್ದೇಶವಾಗಿದೆ. ತರಬೇತಿದಾರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಬಾರದು ಎಂದರು.
ಸಾರ್ವಜನಿಕರಲ್ಲಿ ಬ್ಯಾಂಕ್‌ಗಳ ಬಗ್ಗೆ ವಿಶ್ವಾಸ ಮೂಡುವಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ಬ್ಯಾಂಕ್‌ಗೆ ಹೋಗಲು ಹಿಂಜರಿಯುವ ಸ್ಥಿತಿ ಇದೆ. ಬ್ಯಾಂಕ್ ಶಾಖೆಗಳಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸದಿದ್ದರೆ, ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ.
ಬ್ಯಾಂಕ್ ಗ್ರಾಹಕರೊಂದಿಗೆ ಕನ್ನಡ ಭಾಷೆ ಕಡ್ಡಾಯ:
ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬ್ಯಾಂಕ್‌ಗಳಲ್ಲಿ ಕನ್ನಡದ ಫಲಕಗಳನ್ನು ಹಾಕಿದರೆ ಸಾಲದು. ಎಲ್ಲಾ ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಈಗಾಗಲೇ ಪ್ರಸಕ್ತ ಸಾಲಿನ ಸಾಲ ಸೌಲಭ್ಯಗಳ ಅರ್ಜಿಗಳನ್ನು ಸಂಬಂಧಿಸಿದ ಬ್ಯಾಂಕ್ ಗಳಿಗೆ ಸಲ್ಲಿಸಲಾಗಿದೆ. ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕ್ ಗಳಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಗಳ ವಿಲೇವಾರಿಗೆ ತಿಳಿಸಲಾಗುತ್ತಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದರು.
ಪಿಎಂ ಸ್ವನಿಧಿ ಯೋಜನೆಯಡಿ ಯಾವುದೇ ಅರ್ಜಿಗಳು ಬ್ಯಾಂಕ್ ಗಳಲ್ಲಿ ಬಾಕಿ ಇರುವುದಿಲ್ಲ. ಬ್ಯಾಂಕ್ ಗಳಿಂದ ಯಾವುದೇ ಅಡೆತಡೆ ಇಲ್ಲದೇ ಸಕಾಲದಲ್ಲಿ ಅರ್ಜಿಗಳು ವಿಲೇವಾರಿಯಾಗುತ್ತಿವೆ ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವ್ಯವಸ್ಥಾಪಕ ಡಾ. ಸಂಜೀವ ತಿಗಣಿ ವಿವರಿಸಿದರು.
ಎಲ್.ಡಿ ಎಂ ಪ್ರಶಾಂತ ಘೋಡಕೆ, ನಬಾರ್ಡ್ ಡಿಡಿಎಂ ಅಭಿನವ ಯಾದವ, ಆರ್. ಬಿ.ಐ ಅಧಿಕಾರಿ ಇಲಾ ಸಾಹು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಅಡವಿಮಠ, ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಎ.ಎಲ್.ಡಿ.ಒ ಮಿಥುನ್ ಬಾಬಾಶೆಟ್ ಸೇರಿದಂತೆ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.