ಬಳ್ಳಾರಿ 31: ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆಯನ್ನು ವಿರೋಧಿಸಿದ್ದ ಬಿ ಎಸ್ ಯಡಿಯೂರಪ್ಪ ಇದೀಗ ಮುಖ್ಯಮಂತ್ರಿಯಾಗಿದ್ದು, ತಮ್ಮ ಹಿಂದಿನ ನಿಲುವಿಗೆ ಬದ್ಧರಾಗಿ ಆಡಳಿತ ನಡೆಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ಮಾಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಂದಾಲ್ ಗೆ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದ ನೀವು ಇಂದು ಆಡಳಿತದಲ್ಲಿದ್ದು ಜಮೀನು ಪರಭಾರೆ ಮಾಡದಂತೆ ನಿರ್ಧಾರ ತೆಗೆದುಕೊಳ್ಳಿ ಎಂದರು.
ಮಹದಾಯಿನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯ ಸರಕಾರ ಕೂಡಲೇ ನ್ಯಾಯಾಧೀಕರಣಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಜತೆಗೆ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಹೆಚ್ಚಿನ ಸಹಕಾರಿಯಾಗಿದ್ದ 2013ರ ರ ಭೂಸ್ವಾಧೀನ ಕಾಯ್ದೆಯನ್ನು ಈ ಹಿಂದಿನ ಸರಕಾರ ರೈತ ವಿರೋಧಿಯಾಗಿ ತಿದ್ದುಪಡಿ ಮಾಡಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಆದ್ದರಿಂದ ಈ ತಿದ್ದುಪಡಿ ಕೈ ಬಿಟ್ಟು ಹಳೇ ಸ್ವರೂಪದ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸಂದರ್ಭದಲ್ಲಿ ನೀವು ಎಲ್ಲಾ ರೈತರ ಒಂದು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದು, ಅದನ್ನು ಈಗ ಈಡೇರಿಸುವ ಕಾಲ ಬಂದಿದೆ. ಈಗ ನೀವು ಮತ್ತೆ ಮುಖ್ಯಮಂತ್ರಿಯಾಗಿದ್ದು, ಸಾಲ ಮನ್ನಾ ವಿಚಾರದಲ್ಲಿ ನೀಡಿದ ವಾಗ್ದಾನವನ್ನು ಪಾಲಿಸಬೇಕು ಎಂದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಆದರೆ ಮೋದಿ ಪ್ರಧಾನಿಯಾದ ಮೇಲೆ " ಒನ್ ಗ್ರಿಡ್ ಒನ್ ಇಂಡಿಯಾ" ಎಂದು ಬದಲಾವಣೆ ಮಾಡಿರುವುದು ರೈತರಿಗೆ ಮಾರಕವಾಗಿದೆ. ದೇಶದಲ್ಲಿ ಖಾಸಗೀ ಕಂಪನಿಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ನೆರೆಯ ಶ್ರೀಲಂಕಾ, ಆಫ್ರಿಕಾ, ಅರಬ್ ರಾಷ್ಟ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಥಳೀಯವಾಗಿ ಇರುವ ವಿದ್ಯುತ್ ಸಮಸ್ಯೆ ಬಗೆಹರಿಸದೆ ವಿದೇಶಗಳಿಗೆ ವಿದ್ಯುತ್ ಸರಬರಾಜು ಮಾಡುವುದು ಸರಿಯಲ್ಲ. ಕೇಂದ್ರದ ಧೋರಣೆ ವಿರೋಧಿಸಿ ಸುಪ್ರೀ ಕೋರ್ಟ್ ಮೊರೆ ಹೋಗಲು ಉದ್ದೇಶಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ತುಂಗಭದ್ರ ಜಲಾಶಯದಲ್ಲಿ 33 ಟಿಎಂಸಿಯಷ್ಡು ಹೂಳು ತುಂಬಿದ್ದು, ಈ ಲೆಕ್ಕಾಚಾರವನ್ನು ನೀರುಗಳ್ಳರು ಮಾಡಿರಬೇಕು. ವಾಸ್ತವದಲ್ಲಿ ಜಲಾಶಯದಲ್ಲಿ ಆ ಪ್ರಮಾಣದಲ್ಲಿ ಹೂಳು ತುಂಬಿಲ್ಲ. ಅದಕ್ಕಾಗಿ ನೀರಾವರಿ ತಜ್ಞರ ತಂಡದೊಂದಿಗೆ ಸಮೀಕ್ಷೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.