ಜೆಜೆಎಂ ಅನುದಾನ ಪೋಲಾಗದಿರಲಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

Don't waste JJM grant: GPM CEO Rahul Sharanappa Sankanur

ಬಳ್ಳಾರಿ 17: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಪೂರ್ಣ ಕುಡಿಯುವ ನೀರಿನ ಪೂರೈಕೆಯ ಯೋಜನೆಯಾದ ಜಲಜೀವನ್ ಮಿಷನ್ ಕಾರ್ಯದ ಅನುದಾನ ಪೋಲಾಗದಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ  ಫೀಡ್‌ಬ್ಯಾಕ್ ಫೌಂಡೇಶನ್ ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಸೋಮವಾರ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು. ಹೀಗಾಗಿ  ಕಾರ್ಯಾಗಾರ ಆಯೋಜಿಸಲಾಗಿದ್ದು, ಅವಳಿ ಜಿಲ್ಲೆಯ (ಬಳ್ಳಾರಿ ಮತ್ತು ವಿಜಯನಗರ) ಅಧಿಕಾರಿಗಳು, ಸಿಬ್ಬಂದಿಗಳು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಯೋಜನೆಯ ಬಗ್ಗೆ ಕಾರ್ಯಗಾರದಲ್ಲಿ ಪಡೆದುಕೊಂಡ ಸಮಗ್ರ ವಿವರದೊಂದಿಗೆ ಕಾರ್ಯ ಯೋಜನೆ ರೂಪಿಸಿಕೊಂಡು ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದರು. 

ಸಮುದಾಯದ ಜನರ ಪರಸ್ಪರ ಸಹಕಾರದೊಂದಿಗೆ ಜಲ ಜೀವನ್ ಮಿಷನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿ ಮತ್ತು ಸಿಬ್ಬಂದಿಗಳು ಶ್ರಮಿಸಬೇಕು. ಇದಕ್ಕೆ ಆಯಾ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಿಳಿಸಿದರು. 

ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನವು ಗುಣಮಟ್ಟತೆಯಿಂದ ಕೂಡಿರಬೇಕು. ಗುಣಮಟ್ಟತೆಯ ಆಧಾರದ ಮೇಲೆ ವಿಶ್ವಬ್ಯಾಂಕ್ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮುಖ್ಯವಾಗಿ ಪೈಪ್ ಅಳವಡಿಕೆ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಕಲುಷಿತ ನೀರು ಸರಬರಾಜು ಮೂಲಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದರು. 

ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ಯೋಜನೆಯ ಬಗ್ಗೆ ಸಂಪೂರ್ಣ  ಮಾಹಿತಿಯನ್ನು ತಿಳಿದುಕೊಂಡು ಕಾರ್ಯನಿರ್ವಹಿಸುವುದು ಜವಾಬ್ದಾರಿಯಾಗಿದೆ ಎಂದರು. 

ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಅನುಷ್ಠಾನವಾಗುತ್ತಿರುವ ಕಾಮಗಾರಿಗಳ ಬಗ್ಗೆಯು  ಸಂಪೂರ್ಣವಾದ ಮಾಹಿತಿ ಹೊಂದಿರಬೇಕು. ಯೋಜನೆಯ ಬಗ್ಗೆ ಯಾವುದೇ ನ್ಯೂನತೆಗಳಿದ್ದರೆ ಸಾಧ್ಯವಾದಷ್ಟು ತಮ್ಮ ಹಂತದಲ್ಲಿಯೇ ಬಗೆಹರಿಸಲು ಶ್ರಮಿಸಬೇಕು. ಅದೇರೀತಿ ಯೋಜನೆಯ ಮಹತ್ವವನ್ನು ತಿಳಿಸಿ ಆ ಯೋಜನೆಯು ಅನುಷ್ಠಾನ ಮಟ್ಟದಲ್ಲಿ ಎಲ್ಲರ ಜೋತೆ ಸೇರಿ ಕೆಲಸ ಮಾಡಿದರೆ ಮಾತ್ರ ಈ ಯೋಜನೆಯು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.  

ಕಾರ್ಯಗಾರದಲ್ಲಿ ಗುರುಗಾವ್‌ನ ಫೀಡ್ ಬ್ಯಾಕ್ ಫೌಂಡೇಶನ್‌ನ ಸಿಇಒ ಅಜಯ್ ಸೀನಾ ಅವರು ಶಿಬಿರಾರ್ಥಿಗಳಿಗೆ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ತರಬೇತಿ ನೀಡಿದರು.  

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಿಮಳ, ಜಿಪಂ ಯೋಜನಾ ನಿರ್ದೇಶಕ ವಿನೋದ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೆಚ್‌.ಇಂಧುದಾರ್, ವಿಜಯನಗರ ಜಿಲ್ಲೆಯ ದೀಪಾ.ಎಸ್‌., ಫೀಡ್ ಬ್ಯಾಂಕ್ ಫೌಂಡೇಶನ್‌ನ ರಾಜ್ಯ ಯೋಜನಾ ಸಮನ್ವಯಾಧಿಕಾರಿ ಡಾ.ನಂದಕುಮಾರ್  ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು, ವಿವಿಧ ಗ್ರಾಪಂ ಅಧ್ಯಕ್ಷರು, ಪಿಡಿಒ ಅಧಿಕಾರಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು.