ಡಾ.ರಮಾಕಾಂತ ಜೋಶಿ ನುಡಿನಮನ ಕಾರ್ಯಕ್ರಮ

Dr. Ramakant Joshi Nudi naman program

ಧಾರವಾಡ 24: ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಧಾರವಾಡ ಹಾಗೂ ಧಾರವಾಡ ಕಟ್ಟೆ ಇವರ ಸಹಯೋಗದಲ್ಲಿ ಹಿರಿಯ ಸಾಹಿತಿ, ಪ್ರಕಾಶಕ ಡಾ.ರಮಾಕಾಂತ ಜೋಶಿ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ದಿ. 23 ರಂದು ಸಂಜೆ ನಗರದ ಸಾಧನಕೇರಿ ಬೇಂದ್ರೆ ಭವನದಲ್ಲಿ ಏರಿ​‍್ಡಸಲಾಗಿತ್ತು. 

ಹಿರಿಯ ಚಿಂತಕ ಜಿ.ಸಿ.ತಲ್ಲೂರ ಮಾತನಾಡುತ್ತ ನಮ್ಮ ಜೀವನದ ನಶ್ವರತೆಯನ್ನು ನಮ್ಮ ಕಣ್ಮುಂದೆ ತಂದಿಡುವ ಸಂದರ್ಭವೇ ನುಡಿನಮನವಾಗಿದೆ.  ಬೇಂದ್ರೆಯವರು ಗಂಗಾವತರಣದಲ್ಲಿ ಹೇಳಿರುವಂತೆ ರಾಮಣ್ಣ ಒಲವು, ಸ್ನೇಹ, ಪ್ರೇಮಗಳನ್ನು ನಮ್ಮೆಲ್ಲರಿಗೆ ನೀಡಿ, ನಮ್ಮೆಲ್ಲರಿಂದ ಭೌತಿಕವಾಗಿ ಅಗಲಿದ್ದಾರೆ.  ನಮಗೆ ಸ್ಥಿರಸ್ಥಾಯಿಯಾದ ಒಲುಮೆಯ ಸಿಂಚನವಾಗಿದ್ದರು.  ಮಿತಭಾಷಿ, ಮೃದುಭಾಷಿಯಾಗಿದ್ದ ರಾಮಣ್ಣ ಕನ್ನಡ ನಾಡಿಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೌರಭವನ್ನು ಪಸರಿಸಿದವರು ಎಂದು ಅವರ ಕಾರ್ಯವನ್ನು ಸ್ಮರಿಸಿದರು.   

ಧಾರವಾಡ ಕಟ್ಟೆಯ ಅಧ್ಯಕ್ಷ ಪ್ರೊ.ಬಸವರಾಜ ಡೋಣೂರ ಮಾತನಾಡುತ್ತ ಡಾ.ರಮಾಕಾಂತ ಅವರು ಶ್ರೇಷ್ಠ ಪ್ರಕಾಶಕರಾಗಿದ್ದರೂ ಸಹ ಅವರೊಬ್ಬ ಸೃಜನಶೀಲ ಬರಹಗಾರರಾಗುವ ಎಲ್ಲ ಲಕ್ಷಣಗಳಿದ್ದವು.  ಆದರೆ ತಮ್ಮ ಎಲ್ಲ ಸೃಜನಶೀಲ ಶಕ್ತಿ, ಸಾಮರ್ಥ್ಯವನ್ನೆಲ್ಲ ಪುಸ್ತಕ ಪ್ರಕಾಶನದ ಮೇಲೆ ತೊಡಗಿಸಿದರು.  ಮನೋಹರ ಗ್ರಂಥ ಮಾಲೆಯೇ ಅವರ ಅತ್ಯುತ್ತಮ ಕೃತಿಯಾಗಿದೆ ಎಂದರು.   

ಡಾ. ಬಾಳಣ್ಣ ಶೀಗೀಹಳ್ಳಿ ಅವರು ಮಾತನಾಡುತ್ತ ಜಿ.ಬಿ. ಅವರಂತೆಯೇ ರಮಾಕಾಂತ ಅವರು ಬಹಳ ಶ್ರದ್ಧೆ ಮತ್ತು ನಿಷ್ಠೆಯಿಂದ ಪ್ರಕಾಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರು.  ಜಿ.ಬಿ.ಶತಮನೋತ್ಸವ ಕೃತಿಯಲ್ಲಿ ತಂದ ಮತ್ತು ಮಗನ ಸಂಬಂಧದ ಕುರಿತು ಬಹಳ ಸ್ವಾರಸ್ಯಕರ ಮತ್ತು ವಿನೋದ ಭರಿತ ಲೇಖನ ಬಂದಿರುವುದನ್ನು ಗಮನಿಸಬಹುದಾಗಿದೆ ಎಂದರು. 

ಬೇಂದ್ರೆ ಟ್ರಸ್ಟ್‌ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠರು ಮಾತನಾಡುತ್ತ ಡಾ.ರಮಾಕಾಂತ ಅವರ ನೆನಪುಗಳು ಎಂದೂ ಮಾಸಲಿಕ್ಕೆ ಸಾಧ್ಯವಿಲ್ಲ.  ಜಿ.ಬಿ ಅವರಂತೆ ಡಾ.ರಮಾಕಾಂತರು, ಅವರಂತೆ ಅವರ ಮಗ ಸಮೀರ ಜೋಶಿಯವರು ಕಾಯಕ ನಿಷ್ಠೆಯಿಂದ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗಿ ಮನೋಹರ ಗ್ರಂಥಮಾಲೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.   

ಶ್ರೀನಿವಾಸ ವಾಡಪ್ಪಿಯವರು ಮಾತನಾಡುತ್ತ ಬಹಳ ಕಷ್ಟ ಕಾಲದಲ್ಲಿಯೂ ಸಹ ಪ್ರಕಾಶನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸುವ ಕಾರ್ಯವನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸಿದ ಡಾ.ರಮಾಕಾಂತ ಅವರ ಕಾರ್ಯ ಪ್ರಶಂಸನೀಯವಾದುದು ಎಂದರು.   

ಡಾ.ಶಶಿಧರ ನರೇಂದ್ರ ಮಾತನಾಡುತ್ತ ಡಾ. ರಮಾಕಾಂತ ಜೋಶಿಯವರು ದಾಖಲೀಕರಣ ದೃಷ್ಟಿಯಿಂದ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಿದರು.  ಮುಖ್ಯವಾಗಿ ಗ್ರಂಥಮಾಲೆಯ ಲೇಖಕರ ಕೈಬರಹದ ಕೃತಿಗಳ ಮೂಲ ಪ್ರತಿಗಳನ್ನು ಕಾಯ್ದಿಟ್ಟು ಮುಂದಿನ ಪೀಳಿಗೆಗೆ ಅದನ್ನು ಬಳುವಳಿಯಾಗಿ ನೀಡುವಲ್ಲಿ ಮತ್ತು ಲೇಖಕರ ಭಾವಚಿತ್ರಗಳನ್ನು ತಾವೇ ಸ್ವತಃ ತೆಗೆದು ಅವುಗಳನ್ನು ಸಂಗ್ರಹಯೋಗ್ಯವಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.  ಜೊತೆಗೆ ಸಮಾಜದ ಪ್ರತಿಷ್ಠಿತರು ಗ್ರಂಥಮಾಲೆಯ ಜೊತೆಗೆ ನಡೆಸಿದ ಪತ್ರವ್ಯವಹಾರವನ್ನು ಕೂಡ ಕಾಪಿಡುವಲ್ಲಿ ಅವರ ಶ್ರಮ ಶ್ಲಾಘನೀಯವಾಗಿದೆ ಎಂದರು.   

ಡಾ. ಕೃಷ್ಣ ಕಟ್ಟಿ ಅವರು ಮಾತನಾಡುತ್ತ ಪ್ರೊ.ಕೀರ್ತಿನಾಥ ಕುರ್ತಕೋಟಿ ಅವರ ಸಂಪರ್ಕದಿಂದ ರಾಮಣ್ಣನವರು ಗುಜರಾತ ವಿವಿ ಯಿಂದ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪದವಿಯನ್ನು ಗುಜರಾತನ ವಿಶ್ವವಿದ್ಯಾಲಯದಿಂದ ಪೂರೈಸಲು ಸಾಧ್ಯವಾಯಿತು.  ಪರೋಪಕಾರ ಅವರ ಬಹುದೊಡ್ಡ ಗುಣವಾಗಿದ್ದಿತು. ದೆಹಲಿಯಲ್ಲಿ ಜರುಗಿದ ವರ್ಡ ಬುಕ್ ಫೇರ್‌ನಲ್ಲಿ ಕನ್ನಡ ಪುಸ್ತಕ ಮಳಿಗೆ ಇರಬೇಕೆಂಬ ಹಂಬಲದಿಂದ ಅಲ್ಲಿ ಪುಸ್ತಕ ಮಳಿಗೆ ವ್ಯವಸ್ಥೆ ಮಾಡಿದ್ದರು ಎಂದು ಸ್ಮರಿಸಿದರು.   

ಪ್ರೊ.ಶಶಿಧರ ತೋಡಕರ ಮಾತನಾಡುತ್ತ ನಾಡಿನ ಬಹುತೇಕ ಸಾಹಿತಿ ಗಣ್ಯರ ಹಸ್ತಪ್ರತಿಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಏರಿ​‍್ಡಸಿ, ಅಪರೂಪದ ಸಾಹಿತಿಗಳ ಹಸ್ತಾಕ್ಷರುಗಳು ಸಾಮಾನ್ಯರಿಗೂ ನೋಡಲು ಅವಕಾಶ ಕಲ್ಪಿಸಿದ್ದರು.  ಅದರಲ್ಲಿ ಬಹುಮುಖ್ಯ ಎನಿಸಿದ್ದು, ಕೆಲವೊಂದು ಕೃತಿಗಳ ಟೈಟಲ್ ಮೇಲೆ ಗೆರೆ ಎಳೆದು ಅರ್ಥಪೂರ್ಣವಾದ ಟೈಟಲ್ ನೀಡಿರುವುದು ನಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿತ್ತು ಎಂದು ಸ್ಮರಿಸಿದರು.   

ಬಿ.ಎಲ್‌.ಪಾಟೀಲರು ಮಾತನಾಡುತ್ತ ಕನ್ನಡ ಪುಸ್ತಕಗಳ ಪ್ರಕಾಶನ ಮತ್ತು ಮಾರಾಟ ಬಹಳ ಕಷ್ಟಕರವಾಗಿದ್ದ ಸಂದರ್ಭದಲ್ಲೂ ಎದೆಗುಂದದೇ ಸತತ ಮೂರು ತಲೆಮಾರಿನಿಂದಲೂ ಅದನ್ನು ಮುಂದುವರೆಸಿಕೊಂಡು ಬಂದಿರುವುದು ಅಸಾಮಾನ್ಯವಾದ ಕಾರ್ಯವಾಗಿದೆ ಎಂದರು.   

ಹರ್ಷ ಡಂಬಳ, ಡಾ. ರಾಜಶೇಖರ ಜಾಡರ, ಅರವಿಂದ ಕುಲಕರ್ಣಿ, ಪ್ರೊ.ಧನವಂತ ಹಾಜವಗೋಳ, ಡಾ.ಪ್ರಕಾಶ ಗರೂಡ, ಡಾ.ಅರವಿಂದ ಯಾಳಗಿ, ಲಕ್ಷ್ಮೀಕಾಂತ ಇಟ್ನಾಳ ತಮ್ಮ ನುಡಿ ನಮನವನ್ನು ಸಲ್ಲಿಸಿದರು.   

ಕಾರ್ಯಕ್ರಮದಲ್ಲಿ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ವಿಶ್ರಾಂತ ಕುಲಪತಿ ಜೆ.ಎಚ್‌.ಕುಲಕರ್ಣಿ, ಡಾ. ಎಸ್‌.ಎಮ್‌.ಶಿವಪ್ರಸಾದ, ಡಾ.ಹ.ವೆಂ.ಕಾಖಂಡಿಕಿ, ಡಾ.ಮುಕುಂದ ಲಮಾಣಿ, ಅನಂತ ದೇಶಪಾಂಡೆ, ರಮೇಶ ನಾಡಗಿರ, ಎಸ್‌.ಎಮ್‌.ದೇಶಪಾಂಡೆ, ಪ್ರಶಾಂತ ಮಾಂಡ್ರೆ, ಕೌಶಿಕ್ ಜಿ.ಎನ್‌. ಡಿ. ರಮೇಶ್ ಮುಂತಾದವರು ಉಪಸ್ಥಿತರಿದ್ದರು.