ಬೆಳಗಾವಿ : ಬೆಳಗಾವಿಯ ಸೊಸೆ ಹಾಗೂ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಕೊಣ್ಣೂರ ಮನೆ ಮೇಲೆ ಆರ್ ಎಸ್ ಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೋರ್ವ ಸುಳ್ಳು ವದ್ದಂತಿ ಹರಡಿಸಿದ್ದು, ಇದರ ಬಗ್ಗೆ ಯಾರು ಕಿವಿಗೊಡಬಾರದು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಗುಳೇದ ಅವರು, ಅನಿಸ್ ಉದ್ದೀನ್ ಎಂಬಾತ ಈ ದಾಳಿಯ ಕುರಿತು ಎಕ್ಸ್ ನಲ್ಲಿ ಟ್ವಿಟ್ ಮಾಡಿದ್ದು, ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಪತಿ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಹಳೆ ಪೋಟೋ ಒಂದನ್ನು ಹೊಂದಿಸಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ.
ಅಲ್ಲದೆ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಖುರೇಷಿ ಅವರ ಕುಟುಂಬವನ್ನು ದೆಹಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅವರು, ಈ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರವಷ್ಠೆ ಪಾಕಿಸ್ತಾನದ ವಿರುದ್ದದ ಆಪರೇಷನ್ ಸಿಂದೂರ ದಾಳಿ ಕುರಿತು ಪತ್ರಿಕಾ ವಿವರಣೆ ನೀಡಿದ್ದ ಮಹಿಳಾ ಅಧಿಕಾರಿಯಲ್ಲಿ ಒಬ್ಬರಾದ ಕರ್ನಲ್ ಸೋಫಿಯಾ ಖುರೇಷಿ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಇದೇ ವಿಚಾರವಾಗಿ ಮುಸ್ಲಿಂ ಯುವಕ ಅವರ ಮನೆ ಮೇಲೆ ದಾಳಿಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಿದ್ದನು.