ಸಾಧಕರನ್ನು ಅನುಸರಿಸಿ ಪ್ರಯತ್ನ ಪಟ್ಟು ಯಶಸ್ಸು ಸಾಧಿಸಿ: ಡಾ.ಸುಮನ್ ಮುಚಖಂಡಿ
ಕಲಾದಗಿ(ತಾ.ಬಾಗಲಕೋಟಿ) 15: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ಸು ಗಳಿಸಿ ತಮ್ಮ ಜೀವನ ಸುಗಮಗೊಳಿಸಿಕೊಳ್ಳಬೇಕು. ತಮ್ಮಲ್ಲಿ ವಿಭಿನ್ನ, ವಿಶಿಷ್ಠ ಕಲೆಗಳಿರುತ್ತವೆ. ಅವುಗಳನ್ನು ಹೊರಗೆಡುವಿ ಮುನ್ನಡೆಯಬೇಕು. ಬದುಕಿನಲ್ಲಿ ಯಶಸ್ಸು ಗಳಿಸಲು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ನವನಗರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಸುಮನ್ ಮುಚಖಂಡಿ ಹೇಳಿದರು.
ಅವರು ಕಲಾದಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ ಮತ್ತು ವಿವಿಧ ಘಟಕಗಳ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ನಿಷ್ಠೆ, ಜಾಗೃತ, ಶಿಸ್ತು ಬದ್ಧ ಜೀವನ ನಡೆಸಬೇಕು.ಗುರಿಯತ್ತ ಲಕ್ಷ ವಹಿಸಿ ತಮ್ಮ ಸಾಧನೆಯನ್ನು ಮಾಡಬೇಕು.
ಸಾಧಕರನ್ನು ಅನುಸರಿಸಿ ಪ್ರಯತ್ನ ಪಟ್ಟು ಯಶಸ್ಸು ಸಾಧಿಸಬೇಕೆಂದರು. ಕಲಾದಗಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಲ್.ಹೂಗಾರ ಮಾತನಾಡಿ, ಇತಿಹಾಸ ಕ್ಷೇತ್ರ ಬಹು ದೊಡ್ಡದು. ಇತಿಹಾಸದಲ್ಲಿ ಆಗಿ ಹೋದ ಮಹನೀಯರಂತೆ ಸಾಧಿಸುವ ಛಲವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡಿ, ಶಿಕ್ಷಣ ನಮ್ಮ ಜೀವನದಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣದಲ್ಲಿ ಕೆಲವೊಂದು ಕಾರಣಗಳಿಂದ ಯಶಸ್ಸು ಗಳಿಸಲಾಗದಿದ್ದರೆ ಜೀವನದಲ್ಲಿ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದರೆ ಹತಾಶರಾಗಬಾರದು.
ಮಹಿಳೆಯರು ತಾಳ್ಮೆ, ಸಹನೆಯಿಂದ ಮುನ್ನೆಡೆದರೆ ಜೀವನ ಸಾರ್ಥಕ ಗೊಳಿಸಿಕೊಳ್ಳಬಹುದು. ಮಹಿಳಾ ಸಬಲೀಕರಣಕ್ಕೆ ಸರಕಾರ ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಅವುಗಳನ್ನು ಸದುಪಯೋಗಡಿಸಿಕೊಂಡು ಮುನ್ನೆಡೆಯಬೇಕೆಂದರು.
ಗ್ರಾ.ಪಂ ಅಧ್ಯಕ್ಷೆ ಖಾತುನಬಿ ರೋಣದ, ಉಪಾದ್ಯಕ್ಷ ಫಕೀರ್ಪ ಮಾದಾರ, ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಸರೋಜಿನಿ ಹೊಸಕೇರಿ, ನಾಗರಾಜ ಕಪ್ಪಲಿ, ಡಾ.ಪುಂಡಲೀಕ ಹುನ್ನಳ್ಳಿ, ಡಾ.ಲೋಕಣ್ಣ ಭಜಂತ್ರಿ, ಶ್ರೀದೇವಿ ಮುಂಡಗನೂರ, ಅರ್ಜುನ ನಾಯಕ, ಸಿ.ವಾಯ್.ಮೆಣಸಿನಕಾಯಿ, ಶೋಭಾ ಪೂಜಾರಿ, ಸಿಬ್ಬಂದಿ ಇದ್ದರು.
ಸಹಾಯಕ ಪ್ರಾಧ್ಯಾಪಕಿ ಯಂಕಮ್ಮ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎಲ್ಲಪ್ಪ ಜಿ.ನಿರೂಪಿಸಿದರು. ಉಪನ್ಯಾಸಕ ಮೌಲಾಸಾಬ ಮುಲ್ಲಾ ವಂದಿಸಿದರು.