ಲೋಕದರ್ಶನ ವರದಿ
ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆಯ ಕಾಲುವೆಗಳಿಗೆ ಜೂನ್ 30ರೊಳಗಾಗಿ ಪೂರ್ಣ ಪ್ರಮಾಣದ ನೀರು ಹರಿಸಿ: ರಾಜು ಕಾಗೆ ಸೂಚನೆ
ಕಾಗವಾಡ: ಮತಕ್ಷೇತ್ರದ ರೈತರ ಬಹುದಿನಗಳ ಕನಸಾಗಿರುವ ಖಿಳೆಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಯ ಕಾಲುವೆಗಳಿಗೆ ಸಂಪೂರ್ಣ ಸಾಮರ್ಥ್ಯದಿಂದ ಬರುವ ಜೂನ 30ರ ಒಳಗಾಗಿ ನೀರು ಹರಿಸಬೇಕೆಂದು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅವರು ಶನಿವಾರ ದಿ. 19ರಂದು ಬೆಳಗಾವಿ ಇಂಜಿನಿಯರಿಂಗ್ ಇಲಾಖೆಯ ಉತ್ತರ ವಲಯದ ಮುಖ್ಯ ಕಚೇರಿಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆಯ ಗುತ್ತಿಗೆದಾರ ಗಾಯತ್ರಿ ಕಂಪನಿಯ ಪ್ರಮುಖರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಈಗಾಗಲೇ ಈ ಯೋಜನೆಯ ಎರಡು ಪಂಪ್‌ಸೆಟ್‌ಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ, ಅರಳಿಹಟ್ಟಿ ಕೆರೆಯಲ್ಲಿ ನೀರುಹರಿಸಿ ಪೂಜೆ ನೆರವೇರಿಸಲಾಗಿದೆ. ಬರುವ ಜೂನ ತಿಂಗಳಿನಿಂದ ಸಂಪೂರ್ಣ ಸಾಮರ್ಥ್ಯದಿಂದ ಎಲ್ಲ ಪಂಪ್‌ಸೆಟ್‌ಗಳನ್ನು ಮುಖಾಂತರ ಕಾಲುವೆಗಳಲ್ಲಿ ನೀರು ಹರಿಸಲೇಬೇಕೆಂದು ಕರ್ನಾಟಕ ರಾಜ್ಯ ನೀರಾವರಿ ಇಲಾಖೆಯ ಆಯುಕ್ತ ರಾಜೇಶ ಅಮ್ಮಿನಭಾವಿ ಅವರಿಗೆ ಸೂಚಿಸಿದರು.
ರಾಜೇಶ ಅಮ್ಮಿನಭಾವಿ ಮಾತನಾಡಿ, ಯೋಜನೆಯ ಗುತ್ತಿಗೆದಾರರಾದ ಗಾಯತ್ರಿ ಕಂಪನಿಯವರು ಬರುವ ಜೂನ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಗಡವು ನೀಡಿದರು.
ಇನ್ನೂ ಇದೇ ವೇಳೆ ಗಾಯತ್ರಿ ಕಂಪನಿಯ ಅಧಿಕಾರಿಗಳು ನೀರಾವರಿ ಇಲಾಖೆಯ ಆಯುಕ್ತರಿಗೆ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಮಾಹಿತಿ ನೀಡಿ, ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.
ನೀರಾವರಿ ಇಲಾಖೆ ಸಿಇಒ ಬಿ.ಆರ್. ರಾಟೋಡ, ನೀರಾವರಿ ಇಲಾಖೆಯ ಮುಖ್ಯ ಅಧಿಕಾರಿ ಬಿ.ಎ. ನಾಗರಾಜ, ಪ್ರಶಾಂತ ಪೋತದಾರ, ಗಾಯತ್ರಿ ಕಂಪನಿಯ ಮುಖ್ಯ ಅಧಿಕಾರಿ ಎಂ.ವ್ಹಿ. ಶೇಖರ, ಕೆ. ನಾಗೇಶ ಮತ್ತಿತರರು ಉಪಸ್ಥಿತರಿದ್ದರು.