ಗದಗ 28: ಗದಗ ಜಿಲ್ಲೆಯಲ್ಲಿ ಏಪ್ರಿಲ್ 23 ರಂದು ನಡೆಯುವ ಲೋಕಸಭೆ ಚುನಾವಣಾ ಮತದಾನ ಕಾರ್ಯ ಹಾಗೂ ಬರ ಸಂಕಷ್ಟ ಪರಿಸ್ಥಿತಿಯನ್ನು ಯಾವುದೇ ರೀತಿ ಗೊಂದಲವಿಲ್ಲದೇ ಸಮಸ್ಯೆಯಾಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ನಿರ್ದೇಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಲೋಕಸಭಾ ಚುನಾವಣೆ ಪೂರ್ವಸಿದ್ಧತೆ ಹಾಗೂ ಬರ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮತದಾನ ಸಂದರ್ಭದಲ್ಲಿ ದುರ್ಬಲ ವರ್ಗದವರು ತಪ್ಪದೇ ಮತ ಚಲಾಯಿಸುವಂತೆ ಹಾಗೂ ಸೂಕ್ಷ್ಮ ಮತಗಟ್ಟೆಗಳ ವಿಶೇಷ ಭದ್ರತಾ ವ್ಯವಸ್ಥೆ ಸೇರಿದಂತೆ ಶಾಂತಿ ಹಾಗು ಸುವ್ಯವಸ್ಥಿತ ಮತದಾನ ಮತ್ತು ಮಾದರಿ ನೀತಿ ಸಂಹಿತೆಯ ಕಟ್ಟು ನಿಟ್ಟಿನ ಜಾರಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಿ ಮತದಾನ ಕೇಂದ್ರಗಳ ಅಗತ್ಯ ದುರಸ್ತಿ ಕಾರ್ಯವನ್ನು ಬೇಗನೆ ಪೂರ್ಣಗೊಳಿಸಿ ಮತದಾನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕ್ರಮ ವಹಿಸಬೇಕು. ವಿಕಲಚೇತನರಿಗೆ ಮತದಾನಕ್ಕೆ ಅನುಕೂಲವಾಗುವಂತೆ ವ್ಹೀಲ ಚೇರ ಹಾಗೂ ಇತರೆ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದರು. ಮತದಾರರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಉತ್ತಮ ಕಾರ್ಯಕೈಗೊಂಡಿದ್ದು ಮತದಾನ ದಿನ ಸಮೀಪಿಸಿದಂತೆ ಹೆಚ್ಚಿನ ಕಾರ್ಯಕ್ರಮಗಳನ್ನು ಜರುಗಿಸಲು ಸಲಹೇ ನೀಡಿದ ಅವರು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಜಿಲ್ಲೆಯ 959 ಮತಗಟ್ಟೆಗಳಲ್ಲಿ 188 ಸೂಕ್ಷ ಮತಗಟ್ಟೆಗಳಿದ್ದು ಅವುಗಳಿಗೆ ಸೂಕ್ತ ಭದ್ರತೆ ಒದಗಿಸಿ ಯಾವುದೇ ರೀತಿಯ ಗೊಂದಲಗಳಾಗದಂತೆ ಶಾಂತಿಯುತ ಮತದಾನ ಜರುಗಿಸಲು ಅಗತ್ಯದ ಕ್ರಮ ಜರುಗಿಸಲು ತುಷಾರ ಗಿರಿನಾಥ ಸೂಚಿಸಿದರು.
ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಮಾಹಿತಿ ಪಡೆದ ಪ್ರಾದೇಶಿಕ ಆಯುಕ್ತರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಡಿಬಿಓಟಿ ನೀರಿನ ಯೋಜನೆಯಡಿ ಬರುವ ಗ್ರಾಮೀಣ ಪ್ರದೇಶಗಳಿಗೆ ನೀರಿನ ತೊಂದರೆಯಾಗದಂತೆ ಕ್ರಮ ಜರುಗಿಸಬೇಕು. ಜಾನುವಾರುಗಳಿಗೆ ಅಗತ್ಯದ ಮೇವಿನ ದಾಸ್ತಾನ ಮಾಡಿಕೊಂಡು ಮೇವಿನ ಕೊರತೆಯಾಗದಂತೆ ನಿಗಾವಹಿಸಲು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಮೇವು ಬ್ಯಾಂಕ ಸ್ಥಾಪಿಸಬೇಕು. ಪಟ್ಟಣ ಪ್ರದೇಶಗಳಿಗೆ ನೀರು ಸರಬರಾಜಿಗಾಗಿ ಕೈಗೆತ್ತಿಕೊಂಡಂತಹ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿಯ ಫಲಾನುಭವಿಗಳಿಗೆ ವೇತನ ಸರಿಯಾದ ಸಮಯಕ್ಕೆ ಪಾವತಿಸಿ ಜನರು ಗುಳೆ ಹೋಗುವದನ್ನು ತಪ್ಪಿಸಲು ಹಚ್ಚಿನ ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಜಿಲ್ಲಾ ಪಂಚಾಯತ ಸಿ.ಇ.ಒ ಮಂಜುನಾಥ ಚವ್ಹಾಣ ಚುನಾವಣಾ ಕಾರ್ಯ ಹಾಗೂ ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ಕೈಗೊಂಡ ಕಾರ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶರಾವ, ವಿಧಾನಾ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಪೋಲಿಸ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.