ಮೈತ್ರಿ ಪತನಗೊಂಡರೆ ಸರ್ಕಾರ ರಚನೆ

ಬೆಂಗಳೂರು 1: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರಕಾರ ಪತನಗೊಂಡರೆ ಬಿಜೆಪಿ ಸರಕಾರ  ರಚನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

  ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ, ರಾಜ್ಯಪಾಲರ ಭೇಟಿ ಮಾಡುವ ಕುರಿತು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ, ಇನ್ನೂ ಹತ್ತು ಹನ್ನೆರಡು ಶಾಸಕರು ರಾಜೀನಾಮೆ ನೀಡಿವ ಸಾಧ್ಯತೆ ಇದೆ. 

  ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ. ಆದರೆ ಅತೃಪ್ತ ಶಾಸಕರ ರಾಜೀನಾಮೆಯಿಂದ ಸರಕಾರ  ಬಿದ್ದರೆ ನಾವು ಸರಕಾರ  ರಚನೆ ಮಾಡುತ್ತೇವೆ ಎಂದರು. ಈ ಸರಕಾರ  ಬೀಳಿಸುವ ಅಥವಾ ಆಡಳಿತರೂಢ ಪಕ್ಷಗಳ ಶಾಸಕರನ್ನು ಸೆಳೆಯುವುದಿಲ್ಲ. ಅವರೇ ರಾಜೀನಾಮೆ ಕೊಟ್ಟರೆ ನೋಡೋಣ ಎಂದಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ, ಏನಾಗಲಿದೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. 

 ನಮಗೆ ಬಂದಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್, ಜೆಡಿಎಸ್ ನಲ್ಲಿ 20 ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ, ಅವರು ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ, ಆದರೆ ಸರಕಾರ  ಪತನಗೊಂಡರೆ ಯಾವುದೇ ಕಾರಣಕ್ಕೂ ಚುನಾವಣೆಗೆ ಹೋಗುವುದಿಲ್ಲ. ಅಂತಹ ಸ್ಥಿತಿ ಬಂದರೆ ನಾವು ಸರಕಾರ  ರಚಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಸರಕಾರ  ರಚನೆಯ ಸುಳಿವು ನೀಡಿದರು. 

  ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ, ಅದರ ಬದಲು ರಾಜ್ಯದಲ್ಲಿ ಬರ ಇದೆ, ಬರ ಸಮಸ್ಯೆ ಪರಿಹಾರಕ್ಕೆ ಚರ್ಚೆ  ಆಗಬೇಕು, ಆ ನಿಟ್ಟಿನಲ್ಲಿ ನಾವು ಸದನದಲ್ಲಿ ಚರ್ಶೆಗೆ ಮುಂದಾಗುತ್ತೇವೆ ಎಂದು ಹೇಳಿದರು. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರಲು ಹೊರಟಿರುವುದು ಅವೈಜ್ಞಾನಿಕ, ಯಾವ ಕಾರಣಕ್ಕೂ ಈ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ. ಅದರ ಬದಲು ಕಾಲುವೆ ದುರಸ್ತಿ ಮಾಡಿ, ಬೆಂಗಳೂರಿಗೆ ನೀರು ಕೊಡಲು ನಮ್ಮ ಬೆಂಬಲ ಇದೆ, ಆದರೆ ಅವೈಜ್ಞಾನಿಕವಾಗಿ ಲಿಂಗನಮಕ್ಕಿ ನೀರು ತರವುದು ಸರಿಯಲ್ಲ. ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸರ್ಕಾರ ಕ್ಕೆ ಯಡಿಯೂರಪ್ಪ ಸಲಹೆ ನೀಡಿದರು.