ಮಹಾರಾಣಾ ಪ್ರತಾಪ ದೇಶಾಭಿಮಾನದ ಪ್ರತೀಕ: ಶ್ರೀ

Gurulinga Sri initiates the procession of Maharana Pratap statue

ಮಹಾರಾಣಾ ಪ್ರತಾಪ ಮೂರ್ತಿಯ ಶೋಭಾಯಾತ್ರೆಗೆ ಗುರುಲಿಂಗ ಶ್ರೀ ಚಾಲನೆ  

ತಾಳಿಕೋಟಿ 09: ಭಾರತಾಂಬೆಯ ಹೆಮ್ಮೆಯ ಪುತ್ರ ಮೇವಾರದ ವೀರ ಅರಸ ಮಹಾರಾಣಾ ಪ್ರತಾಪ ಮೂರ್ತಿ ಪ್ರತಿಷ್ಠಾಪನೆಯೂ ದೇಶಾಭಿಮಾನದ ಪ್ರತೀಕವಾಗಿದೆ ಎಂದು ಗುಂಡುಕನಾಳದ ಪರಮ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ಹೇಳಿದರು.  

ಪಟ್ಟಣದ ರಜಪೂತ ಸಮಾಜದ ವತಿಯಿಂದ ರಾಣಾ ಪ್ರತಾಪ  ವೃತ್ತದಲ್ಲಿ ಪ್ರತಿಷ್ಠಾಪನೆಗೊಂಡ ಮಹಾರಾಣಾ ಪ್ರತಾಪ ಸಿಂಹರ ಮೂರ್ತಿಯ ಭವ್ಯ ಶೋಭಾ ಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಕೆಸರಟ್ಟಿಯ ಶ್ರೀ ಸೋಮಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿ ಮಹಾರಾಣಾ ಪ್ರತಾಪ್‌ರ ಶೌರ್ಯ ಮತ್ತು ಪರಾಕ್ರಮ ಇಂದಿನ ಯುವಕರಿಗೆ ಮಾದರಿಯಾಗಬೇಕಾಗಿದೆ, ಪಟ್ಟಣದಲ್ಲಿ ಶ್ರೀ ಮಹಾರಾಣಾ ಪ್ರತಾಪ್ ಸಿಂಹರ ಭವ್ಯ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಎಲ್ಲರಿಗೂ ಅಭಿಮಾನ ಮತ್ತು ಸ್ವಾಭಿಮಾನದ ವಿಷಯವಾಗಿದೆ ನಾನು ಈ ಸಂದರ್ಭದಲ್ಲಿ ರಜಪೂತ ಸಮಾಜದ ಬಾಂಧವರಿಗೆ ಅಭಿನಂದಿಸುತ್ತೇನೆ ಎಂದರು. ರಜಪೂತ ಬಡಾವಣೆಯಿಂದ ಸಕಲ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೂರ್ತಿಯ ಭವ್ಯ ಶೋಭಾ ಯಾತ್ರೆಯು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠ, ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಾರ್ಗದಿಂದ ಹಾಯ್ದು ಶ್ರೀ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ಗೆ ತಲುಪಿತು. ಅಲ್ಲಿ ಶ್ರೀ ಭೀಮಾಶಂಕರ ಜೋಶಿ ಗುರೂಜಿಯವರ ನೇತೃತ್ವದಲ್ಲಿ ಸಕಲ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ವೇದ ಮೂರ್ತಿ ಮುರುಗೇಶ ವಿರಕ್ತಮಠ, ರಜಪೂತ ಸಮಾಜದ ಜಿಲ್ಲಾ ಅಧ್ಯಕ್ಷ ಪರಶುರಾಮ ರಜಪೂತ,ತಾಳಿಕೋಟಿ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ವಿಜಯಸಿಂಗ್ ಹಜೇರಿ,ಪ್ರಕಾಶ ಹಜೇರಿ,ಎಚ್‌.ಎಸ್‌.ಪಾಟೀಲ, ಡಾ.ಸತೀಶ ತಿವಾರಿ, ಡಾ.ಶ್ರೀಶೈಲ ಹುಕ್ಕೇರಿ,ಸುರೇಶ ಹಜೇರಿ,ತಮ್ಮಣ್ಣ ದೇಶಪಾಂಡೆ ಜೈಸಿಂಗ್ ಮೂಲಿಮನಿ, ಗಂಗಾರಾಮಸಿಂಗ್ ವಿಜಾಪುರ, ರವಿ ಕಟ್ಟಿಮನಿ,ಕುಂದನ್ ವಿಜಾಪುರ, ರಾಘು ದೇವಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರಜಪೂತ ಸಮಾಜದ ಬಾಂಧವರು ಮಹಿಳೆಯರು ಇದ್ದರು.