ಕಳಸಾಪುರ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ : ಕುಮಾರ ಪೂಜಾರ
ಗದಗ 19 : ಆರೋಗ್ಯವೇ ಮಹಾ ಭಾಗ್ಯವಾಗಿದ್ದು, ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ಮಾಡಬಾರದು’ ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ತಿಳಿಸಿದರು.ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮನ ಆರೋಗ್ಯ ಮಂದಿರ (ಎಎಎಂ) ಕಳಾಸಾಪುರ ಇವುಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಡ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರದಿಂದ ತುಂಬಾ ಅನುಕೂಲವಾಗಿದೆ ಎಂದರು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಆರೋಗ್ಯದ ಏರುಪೇರುಗಳನ್ನು ತಿಳಿಯ ಬಹುದಾಗಿದೆ. ತಕ್ಷಣವೇ ಸಂಭವಿಸುವ ದುರಂತಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಕೂಲಿ 2025ರ ಏ.1ರಿಂದ 349 ಯಿಂದ 370ಗೆ ಹೆಚ್ಚಳವಾಗಿದೆ. ಕೂಲಿಕಾರರು ಗ್ರಾ.ಪಂಗೆ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು ಸಲಹೆ ನೀಡಿದರು.ಸಮುದಾಯ ಆರೋಗ್ಯ ಅಧಿಕಾರಿ ಡಾ. ಎಲ್. ಕೃಷ್ಣ ಮಾತನಾಡಿ, ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ, ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.130 ಮಹಿಳೆಯರು, 127 ಪುರುಷರು ಸೇರಿ 257 ಕೂಲಿ ಕಾರ್ಮಿಕರ ತೂಕ, ಬಿ.ಪಿ., ಶುಗರ್ ಹಾಗೂ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗೆ ಮಾತ್ರೆಗಳನ್ನು ನೀಡಲಾಯಿತು.ಗ್ರಾಪಂ ಅಧ್ಯಕ್ಷರಾದ ಅನಸೂಯಾ ಬೆಟಗೇರಿ, ಉಪಾಧ್ಯಕ್ಷರಾದ ರಾಜೇಶ್ವರಿ ಘೋಡಕೆ, ತಾಪಂ ಐಇಸಿ ವೀರೇಶ ಬಸನಗೌಡ್ರ, ಗ್ರಾಪಂ ಕಾರ್ಯದರ್ಶಿ ಪ್ರೀತಮ್ ಬಳ್ಳಾರಿ, ಗ್ರಾಪಂ ಸಿಬ್ಬಂದಿಗಳಾದ ಶರಣಪ್ಪ ಹುಯಿಲಗೋಳ, ಮಾರುತಿ ಚಲವಾದಿ, ಬಿಎಫ್ಟಿ ದುರ್ಗಪ್ಪ ಆಲೂರ, ಮೈಲಾರ್ಪ ಸೋಮನಕಟ್ಟಿ, ಆರೋಗ್ಯ ಇಲಾಖೆಯ ಎಲ್.ಎಂ. ದೇವದುರ್ಗ, ಆಶಾ ಕಾರ್ಯಕರ್ತೆಯರಾದ ಬಸವಣ್ಣೆಮ್ಮ ಓಳೇಕಾರ, ಲಲಿತಾ ತಳವಾರ, ರತ್ನ ಲಮಾಣಿ, ಚನ್ನಮ್ಮ ಮಾದರ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಇದ್ದರು.