ನವದೆಹಲಿ 11: ಭಾರತ– ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಇದೇ 16 ಅಥವಾ 17ರಂದು ಆರಂಭಗೊಳ್ಳುವ ಸಾಧ್ಯತೆಯಿದೆ.
ಮೇ 9ರಂದು ಒಂದು ವಾರದ ಮಟ್ಟಿಗೆ ಈ ಪಂದ್ಯಾವಳಿ ಸ್ಥಗಿತಗೊಳಿಸಲಾಗಿತ್ತು. ಆದರೆ ಶನಿವಾರ ಯುದ್ಧ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ಲೀಗ್ ಮುಂದುವರಿಯಲು ಅವಕಾಶವಾಗಿದೆ. ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಅಧಿಕಾರಿಗಳು ಲೀಗ್ ಪುನರಾರಂಭಕ್ಕೆ ಸಂಬಂಧಿಸಿ ಯೋಜನೆ ರೂಪಿಸಲು ಭಾನುವಾರ ಸಭೆ ಸೇರಿದ್ದರು.
ಸೂಕ್ತ ವೇಳಾಪಟ್ಟಿ ರೂಪಿಸಲು ಮಂಡಳಿಯು ಕಾರ್ಯಪ್ರವೃತ್ತವಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ ಶುಕ್ಲಾ ತಿಳಿಸಿದರು.
ಐಪಿಎಲ್‌ಗೆ ಸಂಬಂಧಿಸಿ ಇದುವವರೆಗೆ ನಿರ್ಧಾರ ಕೈಗೊಂಡಿಲ್ಲ. ಪರಿಹಾರ ಕಂಡುಕೊಳ್ಳಲು ಮಂಡಳಿ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಬಿಸಿಸಿಐ ಕಾರ್ಯದರ್ಶಿ, ಐಪಿಎಲ್ ಅಧ್ಯಕ್ಷರು ಪ್ರಾಂಚೈಸಿಗಳು ಮತ್ತು ಇತರ ಭಾಗೀಕದಾರರ ಜೊತೆ ಮಾತುಕತೆಯಲ್ಲಿ ಇದ್ದಾರೆ. ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು. ಸಾಧ್ಯವಾದಷ್ಟು ಬೇಗ ಟೂರ್ನಿ ಆರಂಭಕ್ಕೆ ಪ್ರಯತ್ನ ನಡೆದಿದೆ ಎಂದರು.
ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದೊಡನೆ ಲೀಗ್ ಪುನರಾರಂಭಗೊಳ್ಳಲಿದೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಈ ಪಂದ್ಯ ಮೇ 9ರಂದು ನಿಗದಿಯಾಗಿತ್ತು.<ಎಲ್ಲ ತಂಡಗಳಿಗೆ ಆಟಗಾರರನ್ನು ಕರೆಸಿಕೊಳ್ಳುವಂತೆ ತಿಳಿಸಲಾಗಿದೆ. ಟೂರ್ನಿಯ ಮೇ 16 ಅಥವಾ 17ರಂದು ಲಖನೌ ಪಂದ್ಯದೊಡನೆ ಮುಂದುವರಿಯಲಿದೆ. ಅಂತಿಮ ವೇಳಾಪಟ್ಟಿ ಸೋಮವಾರ ಹಂಚಿಕೊಳ್ಳಲಾಗುವುದು ಎಂದು ಈ ಮೂಲ ಸುದ್ದಿಸಂಸ್ಥೆಗೆ ತಿಳಿಸಿದೆ.
ಎಲ್‌ಎಸ್‌ಜಿ– ಆರ್‌ಸಿಬಿಗೆ ಒಂದೊಂದು ಅಂಕ?:
ಗಡಿಯಲ್ಲಿ ಉದ್ವಿಗ್ನತೆಯ ಕಾರಣ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಧರ್ಮಶಾಲಾದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಎರಡೂ ತಂಡಹಳಿಗಹೆ ತಲಾ ಒಂದೊಂದು ಪಾಯಿಂಟ್ ನೀಡುವ ಸಾಧ್ಯತೆಯಿದೆ. ತಂಡಗಳು ಅಂದು ಜಲಂಧರ್‌ಗೆ ಬಸ್‌ನಲ್ಲಿ ತೆರಳಿ ರೈಲಿನ ಮೂಲಕ ದೆಹಲಿಗೆ ತೆರಳಿದ್ದವು.