ಮಾನದ ಕಲ್ಪನೆ ಕೊಟ್ಟವಳ ಮರ್ಯಾದೆಗೆ ಸಂಚಕಾರ ತಂದರೆ ಭಾರತ ವಿಶ್ವಗುರು ಆಗುತ್ತದೆಯೇ...?

ತಾತಾ ನೀನಂದು ಘಂಟಾಘೋಷವಾಗಿ ಹೇಳಿದೆ “ಯಾವಾಗ ಸ್ತ್ರೀ ಮಧ್ಯರಾತ್ರಿ ನಿರ್ಭಯಳಾಗಿ ನಡು ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಾಳೋ ಅವತ್ತೇ ಭಾರತ ದೇಶಕ್ಕೆ ಸಂಪೂರ್ಣವಾದ ಸ್ವಾತಂತ್ರ್ಯ ಸಿಕ್ಕ ಹಾಗೆ” ಎಂದು. ಅಂದು ಅಷ್ಟೆಲ್ಲ ಹೇಳಿದ ನೀನು ಹೋಗಿಬಿಟ್ಟೆ. ಹಾಗೆ ನೀನು ಹೋದ ದಾರಿಯಲ್ಲಿಯೇ ನಿನ್ನ ಮಾತುಗಳನ್ನು ಕೂಡ ಕಳುಹಿಸಿ ಬಿಟ್ಟಿದ್ದಾರೆ. ಅದೃಷ್ಟಕ್ಕೆ ಆಗಾಗ ನಿನ್ನನಾದರೂ ನೆನಸುತ್ತಾರಲ್ಲ ಅದೇ ನಮ್ಮ ಪುಣ್ಯ ಎಂದುಕೊಂಡು ನಾವೂ ಸುಮ್ಮನಾಗಿ ಬಿಟ್ಟಿದ್ದೇವೆ. ಅಂದು ನೀನೆನೋ ನಮ್ಮ ದೇಶದ ಜನರಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಭರವಸೆಯಲ್ಲಿ, ಮುಂದೆ ನೀ ಕಂಡ ಕನಸು ನನಸಾಗುತ್ತದೆ ಎನ್ನುವ ಆಸೆಯಲ್ಲಿ, ನೀ ಮಾಡಿದ ಹೋರಾಟದಿಂದ ಸಿಕ್ಕ ಸ್ವಾತಂತ್ರ್ಯದ ಬೆಳಕು ಎಲ್ಲೆಡೆ ಹರಡುತ್ತದೆ ಎನ್ನುವ ನಂಬಿಕೆಯಲ್ಲಿ ಹಾಗೆ ಹೇಳಿ ಹೋದೆ. ಆದರೆ ನೀನು ಹೇಳಿದಂತೆ  ಮಧ್ಯ ರಾತ್ರಿ ಬೇಡಾ; ಹಗಲು ಹೊತ್ತಿನಲ್ಲಿಯೇ ಮಹಿಳೆಯು ನಿರ್ಭಯಳಾಗಿ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ಪರಿವರ್ತನೆಯಾಗುತ್ತಾರೆಂದು ನೀನು ನಂಬಿದ್ದ ಭಾರತೀಯರೇ ಇಂದು ಪಶುಗಳಾಗುತ್ತಿದ್ದಾರೆ. ಪಶುಗಳಿಗೂ ಸಹ ಇವರನ್ನು ಹೋಲಿಕೆ ಮಾಡಲು ಸಾಧ್ಯವಾಗದಷ್ಟು ರಕ್ಕಸತನಕ್ಕೆ ಬಿದ್ದ ಕಾಮಪಿಪಾಸುಗಳು ಇಂದು ಸೃಷ್ಠಿಯಾಗಿದ್ದಾರೆ. ಅಂದಮೇಲೆ ನೀನೆ ಹೇಳಿದಂತೆ ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲವಾ? ಸಿಕ್ಕಿಲ್ಲವೆಂದರೆ ನಮ್ಮನ್ನು ಆಳುತ್ತಿರುವ ಆ ಹೊಸ ಬ್ರಿಟೀಷರಾದರೂ ಯಾರು? ಈಗ ಪಡೆದಿರುವುದು ಸ್ವಾತಂತ್ರ್ಯವಾ ಅಥವಾ ಸ್ವೇಚ್ಚಾಚಾರವೆಂಬ ಪಾಪದ ಪಿಂಡವಾ? ಅಂದರೇ ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುವುದು ಯಾವಾಗ? ಈಗಿರುವುದನ್ನು ಸ್ವಾತಂತ್ರ್ಯ  ಎಂದು ಕರೆಯುತ್ತಿದ್ದೇವಲ್ಲ ಅದು ಯಾರ ಸ್ವತ್ತು? ಈ ಎಲ್ಲ ಪ್ರಶ್ನೆಗಳಿಗೂ ಗಾಂಧಿ ತಾತಾ ನೀನೆ ಬಂದು ಉತ್ತರಿಸಬೇಕು. 

ಅಂದು ಬ್ರಿಟೀಷರ ಕಬಂಧ ಬಾಹುವಿನಿಂದ ಭಾರತ ಮಾತೆಯನ್ನು ಬಿಡುಗಡೆಗೊಳಿಸುವುದಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾತ್ಮಾ ಗಾಂಧಿ ಸ್ವಾತಂತ್ರ್ಯದ ಕುರಿತು ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದರು. ಸ್ವಾತಂತ್ರ್ಯ ಸಿಕ್ಕು ಅರ್ಧ ದಶಕಗಳೇ ಕಳೆದು ಹೋದವು, ಅದೆಷ್ಟೊ ಸರ್ಕಾರಗಳು ಬದಲಾದವು, ಅದೆಷ್ಟೋ ಯೋಜನೆಗಳು ಜಾರಿಯಾದವು, ಅದೆಷ್ಟೋ ಮಹನೀಯರ ಮಾತುಗಳೇ ಮುಗಿದು ಹೋದವು. ಆದರೆ ಗಾಂಧೀಜಿ ಹೇಳಿದ ಸ್ವಾತಂತ್ರ್ಯದ ಕಲ್ಪನೆಯು ಹಗಲಿನಲ್ಲಿಯೂ ಕಾಣುತ್ತಿಲ್ಲ ಅಂದ ಮೇಲೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು ತಾನೆ?..... 

ಹೌದು ಗಾಂಧೀಜಿಯವರ ಸ್ವಾತಂತ್ರ್ಯದ ಕಲ್ಪನೆಯನ್ನು ಪುರುಷ ಪ್ರಧಾನ ಸಮಾಜದಲ್ಲಿ ವಾಸಿಸುವ ನಾವುಗಳು ಒಪ್ಪಿಕೊಳ್ಳಲೇ ಬೇಕು. ಆದರೆ ಒಪ್ಪಿಕೊಳ್ಳಬೇಕಾದ ಸತ್ಯವನ್ನು ಅಪ್ಪಿತಪ್ಪಿಯೂ ಜ್ಞಾಪಿಸಿಕೊಳ್ಳದೆ ಮರೆತಂತೆ ಬದುಕುತ್ತಿರುವುದು ಮಾತ್ರ ಕಟು ವಾಸ್ತವ ಅಲ್ಲವೇ? ಅಂದರೆ ಗಾಂಧೀಜಿ ಹೇಳಿದ ಸ್ವಾತಂತ್ರ್ಯದ ವ್ಯಾಖ್ಯೆ ತಪ್ಪಾಗಿದೆಯೇ ಅಥವಾ ನಾವುಗಳು ನಡೆಯುತ್ತಿರುವ ದಾರಿ ತಪ್ಪಾಗಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿ, ಯಾರಿಗೂ ನಿಲುಕದ ಉತ್ತರವಾಗಿ ಕಾಡುತ್ತಿದೆ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ”. ಎನ್ನುವ ಸಂಸ್ಕೃತ ಶ್ಲೋಕದೊಂದಿಗೆ ಹೆಣ್ಣನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸಿದ ಸನಾತನ ಸಂಸ್ಕೃತಿ ನಮ್ಮದು. ಅಂದರೆ ಎಲ್ಲಿ ನಾರಿಯರನ್ನು ಗೌರವ ಆದರ್ಶಗಳಿಂದ ಕಾಣುತ್ತಾರೋ, ಎಲ್ಲಿ ತಾಯಿಯನ್ನು ದೇವರೆಂದು ಪೂಜಿಸಲ್ಪಡುತ್ತದೆಯೋ ಅಲ್ಲಿ ದೇವರು ವಾಸಿಸುತ್ತಾನೆ. ಆದರೆ ಇಂದು ಮಹಿಳೆಯ ಮೇಲೆ ದೌರ್ಜನ್ಯವಾಗುತ್ತಿರುವುದನ್ನು ನೋಡಿದರೆ ಭಾರತದ ಸಂಸ್ಕೃತಿ ಅದಪಥನಕ್ಕೆ ಸರಿಯುತ್ತಿದೆಯೋ ಏನೊ ಎಂದು ಅನ್ನಿಸುತ್ತಿದೆ. ಪೂಜ್ಯನೀಯ ಸ್ಥಾನದಲ್ಲಿ ಕಾಣಬೇಕಾದ ಮಹಿಳೆಯರ  ಮೇಲೆ ಪುರುಷ ತನ್ನ ಪೌರುಷ, ಪರಾಕ್ರಮ ತೋರುತ್ತಿರುವುದನ್ನು ಕಂಡರೆ ಇಡೀ ಸುಶಿಕ್ಷತ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಭಯಾನಕವಾದ ಅತ್ಯಾಚಾರ ಪ್ರಕರಣಗಳು ಇದಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಇವುಗಳನ್ನು ನೋಡಿದರೆ ಗಾಂಧೀಜಿ ಕಂಡ ಕನಸಿನ ಭಾರತ, ಸ್ವತಂತ್ರ್ಯ ಭಾರತ, ಅಪರಾಧ ಮುಕ್ತ ಭಾರತ, ಸ್ವಾರ್ಥ ರಹಿತ ಭಾರತ ಸೇರಿದಂತೆ ರಾಮರಾಜ್ಯದ ಕಲ್ಪನೆ, ಭಾರತ ಸಂವಿಧಾನದ ನಾಲ್ಕನೇ ಅಧ್ಯಾಯದಲ್ಲಿ ನೀಡಿರುವ ಕಲ್ಯಾಣರಾಷ್ಟ್ರ ಎನ್ನವುದು ಕೇವಲ ಕನಸಿನ ಮಾತಾ? ಎನ್ನುವ ಪ್ರಶ್ನೆ ಮೂಡುತ್ತಿದೆ. ಮಾನದ ಕಲ್ಪನೆ ಕೊಟ್ಟವಳ ಮರ್ಯಾದೆಗೆ ಸಂಚಕಾರ ತಂದರೆ ಭಾರತ ವಿಶ್ವಗುರು ಆಗುತ್ತದೆಯೇ...? ಗೋದ್ರಾ ಹತ್ಯಾಕಾಂಡ ಸಂದರ್ಭದಲ್ಲಿ ನಡೆದ ಬಿಲ್ಕಿಷ್ ಭಾನು ಪ್ರಕರಣದಲ್ಲಿ ಕೋರ್ಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಜೈಲಿಗಟ್ಟಿತ್ತು. ಆದರೆ ನಂತರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಮುಂದೆ ನಿಂತು ಅಪರಾಧಿಗಳನ್ನು ಸನ್ನಡತೆಯನ್ನು ಆಧರಿಸಿ ಅವರನ್ನು ಬಿಡುಗಡೆ ಮಾಡುತ್ತದೆ ಎಂದರೆ ಇದು ವಿಪರ್ಯಾಸವೋ ಅಥವಾ ಈ ದೇಶದಲ್ಲಿನ ಹೆಣ್ಣುಮಕ್ಕಳ ಹಣೆಬರಹೋ ಗೊತ್ತಾಗುತ್ತಿಲ್ಲ. ನರ್ಸ ಅರುಣಾ ಶಾನಬಾಗ ಮೇಲೆ ಅತ್ಯಾಚಾರ ಮಾಡಿ ಕೊಲೆಯತ್ನ ಮಾಡಿದ ಅಪರಾಧಿ ಶಿಕ್ಷೆ ಮುಗಿಸಿ ಬಂದು ಮದುವೆಯಾಗಿ ಸಂಸಾರ ಮಾಡಿದ. ಆದರೆ ಅತ್ಯಾಚಾರದಿಂದ ಸಾಯುವ ವರೆಗೂ ಅರುಣಾ ಶಾನಬಾಗ ಕೋಮಾಗೆ ಹೋಗಿ ಜೀವಂತ ಶವವಾಗಿ ಉಳಿದಳು. ಇದಕ್ಕೆ ಏನೆನ್ನಬೇಕು ಹೇಳಿ? ಇನ್ನೂ ಧರ್ಮ ಪೀಠದ ಮೇಲೆ ಕುಳಿತಿರುವ ಸ್ವಾಮಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ. ಅದೂ ಕೂಡ ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಂದರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ. ಇಲ್ಲಿ ಸ್ವಾಮಿಜಿ ತಪ್ಪು ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ಕೋರ್ಟು ನಿರ್ಧಾರ ಮಾಡುತ್ತದೆ. ಆದರೆ ಇಂಥವರ ಮೇಲೆಯೇ ಇಂಥ ಆರೋಪಗಳು ಬಂದರೆ ಭಕ್ತಿಯಿಂದ ನಾನು ಕೈ ಮುಗಿದು ಕಾಲಿಗೆ ಬೀಳುವ ವ್ಯಕ್ತಿಯನ್ನು ಒಂದು ಬಾರಿ ಅನುಮಾನಿಸಬೇಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಯಾರಿಂದ ಈ ಸಮಾಜ ಉದ್ಧಾರವಾಗಬೇಕಿದೆಯೇ ಅವರೆಲ್ಲ ರಾಜಕೀಯದಲ್ಲಿ ತೊಡಗಿದ್ದಾರೆ. ಮಂತ್ರಿಗಳ ಹಿಂದೆ ರಿಮೋಟ್ ಕಂಟ್ರೋಲ್‌ಗಳಂತೆ ಕಾರ್ಯ ಮಾಡುತ್ತಾರೆ. ಸಾಲದೆಂಬಂತೆ ಇದರ ಮೇಲೆ ಯಾವುದನ್ನು ಬೇಡ ಎಂದು ತಿರಸ್ಕಾರ ಮಾಡಿ ಸನ್ಯಾಸಿಗಳಾಗಿರುತ್ತಾರೋ ಅಂಥಹ ವಿಚಾರಗಳ ಆಧಾರವಾಗಿಯೇ ಆರೋಪಗಳು ಬರುವುದು ದುರಂತವೇ ಸರಿ. ಇದೆಲ್ಲವನ್ನು ನೋಡಿದಾಗ ಗಾಂಧೀಜಿಯ ಕನಸಿ ರಾಮರಾಜ್ಯ ಎಲ್ಲಿ ಹೋಯಿತು ಹೇಳಿ? ಈಗ ಈ ವಿಚಾರಗಳ ಕುರಿತು ಚರ್ಚೆಗಳು ಪ್ರತಿಭಟನೆಗಳು ಜೋರಾಗುತ್ತಿವೆ ನಾವು ಕೂಡ ಅದನ್ನೆ ಮಾಡುತ್ತಿದ್ದೇವೆ.  

ಮಾಧ್ಯಮದಲ್ಲಿ ಸುದ್ದಿಯಾಗುವ ಕೆಲವು ಪ್ರಕರಣಗಳು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗುತ್ತವೆ. ಮತ್ತೆ ಕೆಲವು ಸುದ್ದಿಯಾಗದೆ ಸದ್ದಿಲ್ಲದೆ ಮುಚ್ಚಿ ಹೋಗುತ್ತವೆ. ಒಟ್ಟಿನಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ದಿನಂಪ್ರತಿ ನಡೆಯುತ್ತಲೇ ಇವೆ. “ಉಸಿರು ನೀಡುವ ಹೆಣ್ಣು, ಹಸಿರು ನೀಡುವ ಪ್ರಕೃತಿ, ಹೆಸರು ನೀಡುವ ದೇಶ ಇಲ್ಲದೇ ಹೋಗಿದ್ದರೆ ನಾವ್ಯಾರು ಇರುತ್ತಲೇ ಇರಲಿಲ್ಲ” ಆದರೆ ಉಸಿರು ನೀಡುವ ಹೆಣ್ಣುಮಗಳೆ ಇಂದು ಉಸಿರು ಬಿಗಿ ಹಿಡಿದು ಬದುಕುವಂತ ಭಯಾನಕ ವಾತಾವರಣ ಸೃಷ್ಠಿ ಮಾಡಿರುವ ನರ ರಾಕ್ಷಸರನ್ನು ಕಂಡಾಗ ನನಗೆ ಅತ್ಯಂತ ಹೆಸಿಗೆ ಹಾಗೂ ಅಸಹ್ಯ ಎನ್ನಿಸುತ್ತದೆ. ಶಾಲೆಗೆ ಹೋದ ಬಾಲಕಿ, ಕೆಲಸಕ್ಕೆ ಹೋದ ಮಗಳು, ಟ್ಯೂಶನ್‌ಗೆ ಹೋದ ತಂಗಿ, ಮಾರ್ಕೇಟ್‌ಗೆ ಹೋದ ಹೆಂಡತಿ, ದೇವಸ್ಥಾನಕ್ಕೆ ಹೋದ ತಾಯಿ ಒಂದು ಕ್ಷಣ ಬರುವುದು ತಡವಾದರು ಸಹ ಮನಸ್ಸು ವಿಚಲಿತವಾಗಿಬಿಡುವಷ್ಟರ ಮಟ್ಟಿಗೆ ಅತ್ಯಾಚಾರಿಗಳು ನಮ್ಮ ಜನರಲ್ಲಿ ಭಯ ಹುಟ್ಟಿಸಿದ್ದಾರೆಂದರೆ ಒಂದು ಬಾರಿ ಆಲೋಚಿಸಿ ಅಂದು ಮಹಾತ್ಮರೆಲ್ಲ ಕಂಡ ಕನಸಿನ ಭಾರತ ಇಂದು ಏನಾಗಿದೆ ಎಂದು. ಇದಕ್ಕೆ ಕಾರಣವಾದರೂ ಏನು? ಎಂದು ಒದೊಂದಾಗಿ ಹುಡುಕುತ್ತಾ ಹೋದರೆ ಅಲ್ಲಿ ಸಿಕ್ಕುವ ಕಾರಣಗಳು, ಅದರಿಂದ ಹುಟ್ಟುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರೊಳಗೆ ನಮ್ಮ ಇಡೀ ವ್ಯವಸ್ಥೆಯೇ ಕರಾಳವಾಗಿ ಕಾಣಲಾರಂಭಿಸುತ್ತದೆ. ಇದಕ್ಕೆ ಕಾರಣವಾದರೂ ಏನು? ತಮ್ಮ ಅನುಕೂಲಕ್ಕಾಗಿ ಅನವಶ್ಯಕ ಶಾಸನವನ್ನು ರಚಿಸುವ ನಮ್ಮ ಶಾಸಕಾಂಗ ಇಂತ ಘೋರ ಘಟನೆಗಳ ಕುರಿತು ಮೌನ ತಾಳಿರುವುದರ ಪರಿಣಾಮವೇ? ಶಾಸಕಾಂಗವೇ ಸುಮ್ಮನಾದ ಮೇಲೆ ನನ್ನದೇನಿದೆ ಎಂದು ತಣ್ಣಗೆ ಕುಳಿತ ನಮ್ಮ ಕಾರ್ಯಾಂಗದ ಪ್ರಮಾಧದ ಫಲವೇ? ಇಲ್ಲ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆಯನ್ನು ಕಂಡವರು ಅತ್ಯಾಚಾರಕ್ಕೆ ಪ್ರಯತ್ನಿಸುವುದು ಬೇಡ, ಆ ನಿಟ್ಟಿನಲ್ಲಿ ವಿಚಾರ ಮಾಡುವುದಕ್ಕೂ ಹೆದರವಂತ ಶಕ್ತಿಯುತ ಕಾನೂನನ್ನು ಜಾರಿಗೆ ತರದೇ ಇರುವ ನಮ್ಮ ನ್ಯಾಯಾಂಗದ ತಪ್ಪಿನ ಫಲಶೃತಿಯೇ? ಒಂದು ತಿಳಿಯುತ್ತಿಲ್ಲ. ಆದರೆ ವಿಶ್ವಗುರುವಾಗಿ ಮಾನ್ಯತೆ ಪಡೆಯಬೇಕಾದ ದೇಶದಲ್ಲಿ ನಮ್ಮ ಮೊದಲ ಗುರುವಿಗೆ ರಕ್ಷಣೆ ಇಲ್ಲ ಎಂದ ಮೇಲೆ ಯಾವ ಮಟ್ಟದಲ್ಲಿ ಬೆಳೆದರೇನು? ಎನ್ನುವ ನಿರಾಸೆಯ ಕಾರ್ಮೋಡ ಕವಿಯುತ್ತಿದೆ. ಜಗತ್ತಿಗೆ ಶಾಂತಿ, ಸಹಬಾಳ್ವೆ, ಸಮಾನತೆ, ಪ್ರೇಮ, ತ್ಯಾಗ, ಆಧ್ಯಾತ್ಮ, ಅನುಭಾವ ಬೋಧಿಸಿದ ದೇಶವಿಂದು ಸೂತಕದ ಮನೆಯಂತಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಸೀತೆಯನ್ನು ರಾವಣ ಮುಟ್ಟಿದ್ದಕ್ಕೆ ರಾವಣನ ಅಂತ್ಯವೇ ಆಯಿತು, ದ್ರೌಪದಿಯ ಸೆರಗಿಗೆ ಕೈ ಇಟ್ಟ ಕಾರಣಕ್ಕೆ ಮಹಾಭಾರತ ಯುದ್ಧವೇ ಸಂಭವಿಸಿತು, ಆದರೆ ಇಂದು ನಿತ್ಯವು ನಮ್ಮ ದೇಶದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರು ಯಾವುದೇ ಪಾಪಿಯ ಅಂತ್ಯವಾಗದಿರುವುದನ್ನು ನೋಡಿದರೆ ಭಾರತದ ಸ್ಥಿತಿ ಅದೋಗತಿಯತ್ತ ಸಾಗುತಿದೆ ಎನ್ನಿಸುತ್ತಿದೆ. 

ಕೆಲವು ವರ್ಷಗಳ ಹಿಂದೆ ದೆಹಲಿಯ ನಿರ್ಭಯಾಳ ಮೇಲೆ ಅತ್ಯಾಚಾರ ನಡೆದಾಗ ಇಡೀ ದೇಶ ಹೊತ್ತಿ ಉರಿಯಿತು. ಆ ಕ್ಷಣದಲ್ಲಿ ನಮ್ಮವರು ಎಚ್ಚೆತ್ತುಕೊಂಡಿದ್ದರೆ ಒಂದು ಗಟ್ಟಿಯಾದ ಕಾನೂನು ಜಾರಿಗೆ ತರಬಹುದಿತ್ತು. ಆದರೆ ಆ ಪ್ರಕರಣ ವಿರೋಧಪಕ್ಷಗಳು ಆಡಳಿತ ಪಕ್ಷವನ್ನು ಹಣಿಯುವ ಕಾರ್ಯಕ್ಕೆ ಅಸ್ತ್ರವಾಯಿತೇ ವಿನಃ ಅದರಿಂದ ಸುಧಾರಣೆಯ ಒಂದಂಶವು ನಮಗೆ ಕಾಣಿಸಲಿಲ್ಲ. ಆ ಸಂದರ್ಭದಲ್ಲಿ ಒಬ್ಬ ಕೇಂದ್ರದ ಮಂತ್ರಿ ಹೇಳುತ್ತಾನೆ, ಹದಿ ಹರೆಯದ ಯುವತಿಯರು ತೊಡುತ್ತಿರುವ ಪ್ರಚೋದನಕಾರಿ ಉಡುಪುಗಳು ಅತ್ಯಾಚಾರಕ್ಕೆ ಆಸ್ಪದ ಮಾಡಿಕೊಡುತ್ತವೆಯಂತೆ. ಅಂದರೇ ಆ ಮಂತ್ರಿಯ ಪ್ರಕಾರ ಅತ್ಯಾಚಾರವಾಗುವುದು ಕೇವಲ ಹದಿ ಹರೆಯದ ಯುವತಿಯರ ಮೇಲೆ ಅನ್ನೋ ರೀತಿಯಿತ್ತು. ಯಾಕೆ ಮೈ ತುಂಬಾ ಬಟ್ಟೆ ತೊಟ್ಟ, ಸೀರೆ ಉಟ್ಟ ಗೃಹಿಣಿಯರ ಮೇಲೆ ಅತ್ಯಾಚಾರವಾಗುತ್ತಿಲ್ಲವೆ? ಗೃಹಿಣಿಯರನ್ನು ಬಿಡಿ ಹಾಲುಗಲ್ಲದ ಕಂದಮ್ಮಗಳನ್ನು, ಸಾವಿನ ದಾರಿಯಲ್ಲಿ ನಡೆಯುತ್ತಿರುವ ವಯೋವೃದ್ಧರನ್ನೂ ಈ ಪರಮ ಪಾಪಿಗಳು ಹುರಿದು ಮುಕ್ಕುತ್ತಿದ್ದಾರೆ ಎನ್ನುವುದರ ಕನಿಷ್ಟ ಪರಿವೆಯೂ ಆ ನಾಲಾಯಕರಿಗೆ ಇಲ್ಲ ಎಂದರೆ ನಮ್ಮ ಭವ್ಯ ಭಾರತದ ಕನಸು ಏನಾಗಬೇಕು ನೀವೇ ಹೇಳಿ? 

ಇದೇ ರೀತಿ ಮುಂಬೈನಲ್ಲಿ ನಡೆದ ಅತ್ಯಾಚಾರ ಪ್ರಕರಣ ಒಂದರ ಕುರಿತು ಸಿನಿಮಾ ತಾರೆ ಹಾಗೂ ಸಂಸದೆಯಾಗಿರುವ ಹೇಮಾಮಾಲಿನಿ ಇಂದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಒಬ್ಬಂಟಿಯಾಗಿ ಮನೆಯಿಂದ ಹೊರ ಬರಬಾರದು ಎಂದು ಹೇಳಿದರು. ಹೌದಮ್ಮಾ ಅವರೇನೊ ಸಂಸದೆ, ಅವರಿಗೆ ಸಕ್ಯೂರಿಟಿ ಇಟ್ಟುಕೊಳ್ಳುವ ಶಕ್ತಿಯಿದೆ ಅದಕ್ಕಾಗಿ ಇಂತಹ ಅಸಂಬದ್ಧ ಹೇಳಿಕೆಯನ್ನು ನೀಡುತ್ತಾರೆ. ಗಂಡ ಹೆಂಡತಿ ಒಟ್ಟಿಗೆ ತೆರುಳುತ್ತಿರುವ ಸಂದರ್ಭದಲ್ಲಿ ಗಂಡನೆದುರೆ ಹೆಂಡತಿಯನ್ನು ಅತ್ಯಾಚಾರ ಮಾಡಿದ ಪ್ರಕರಣಗಳನ್ನು ನಾವು ಓದಿದ್ದೆವೆ. ಅಂದಮೇಲೆ ಹೇಮಾಮಾಲಿನಿ ಹೇಳಿದಂತೆ ಮಾಡಿದರೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆಯೇ? 

ದೆಹಲಿ ಪ್ರಕರಣದಲ್ಲಿ ಇದ್ದ ಒಬ್ಬ ಆರೋಪಿ ಇನ್ನೂ ಅಪ್ರಾಪ್ತ ವಯಸ್ಕ ಎಂದು ನುಣಿಚಿಕೊಳ್ಳುವ ಪ್ರಯತ್ನ ನಡೆಯಿತು. ನಿಜಾ ಅವನು ಅಪ್ರಾಪ್ತನೇ ಇರಬಹುದು ಈ ವಯಸ್ಸಿನಲ್ಲಿಯೇ ಇಂಥ ದುಷ್ಕೃತ್ಯಕ್ಕೆ ಕೈ ಹಾಕಿರುವ ಈತ ನಾಳೆ ಒಬ್ಬ ದೊಡ್ಡ ಅತ್ಯಾಚಾರಿಯಾಗಿ ಕಾಣಿಸಿಕೊಂಡರೆ ಆಗೇನು ಮಾಡುವಿರಿ. ಎಂದು ನಾವು ನ್ಯಾಯಾಂಗವನ್ನೇ ಕೇಳುವಂತ ಅನಿವಾರ್ಯ ಸ್ಥಿತಿ ಎದುರಾಯಿತು. 

ಗಂಭೀರ ಸಮಸ್ಯೆಗಳು ತಲೆದೋರಿದಾಗ ಕಾನೂನುಗಳನ್ನು ಮಾಡುತ್ತೇವೆ, ಅಪರಾಧ ತಡೆಯುತ್ತೇವೆ ಎಂದು ಹೇಳುವುದೆ ಆಯಿತು ಹೊರತು ಅದಕ್ಕಾಗಿ ನಾವು ಮಾಡಿರುವುದಾದರು ಏನು? ಇಂದು ಭಾರತದಾದ್ಯಂತ ಅಂತರ್‌ಜಾಲದಲ್ಲಿ ಠಿಠಟಿ, ಋಜಚಿಟಿ ಟ, ಜರಡಿ ನಂತಹ ಪ್ರಚೋದನಕಾರಿ ಜಾಲತಾಣಳ ಹುಡುಕಾಟದ ಸಂಖ್ಯೆ ಕೇಳಿದರೆ ಎದೆ ಝೆಲ್ ಎನ್ನುತ್ತದೆ. ಪ್ರತಿ ಕ್ಷಣ ಇಪ್ಪತ್ತು ಕೋಟಿಯಷ್ಟು ಜನ ಇದನ್ನು ವಿಕ್ಷಿಸುತ್ತಾರೆ. ಕಾರಣ ನಮ್ಮಲ್ಲಿ ಸೈಬರ್ ಕಾನೂನನ್ನು ಬಿಗಿಗೊಳಿಸಿಲ್ಲ. ಇದು ಹದಿ ಹರೆಯದ ಯುವಮನಸ್ಸುಗಳ ಮೇಲೆ ಮರ್ಮಾಘಾತ ನೀಡುವುದು ಮಾತ್ರವಲ್ಲದೇ ಅಪರಾಧಕ್ಕೆ ಹಾಗೂ ಅತ್ಯಾಚಾರಕ್ಕೆ ಪ್ರಚೋಧನೆ ನೀಡುತ್ತಿವೆ. ಅಪ್ರಾಪ್ತ ಬಾಲಕರ ಮೋಬೈಲ್‌ನಲ್ಲಿ ನೀಲಿಚಿತ್ರಗಳು ರಾರಾಜಿಸುತ್ತವೆ. ಇದರಿಂದ ಏಕಾಗ್ರತೆ ಕಳೆದುಕೊಂಡ ಯುವ ಜನತೆ ದಾರಿ ತಪ್ಪುತ್ತಿದೆ. ಇದಕ್ಕಾಗಿ ಇರುವ ಕಾನೂನನ್ನು ಇನ್ನಷ್ಟು ಬಲಗೊಳಿಸಬೇಕು. 

ಕೇವಲ ಅತ್ಯಾಚಾರ ನಡೆದಾಗ ಮಾತ್ರ ಮಹಿಳೆಯರ ಪರ ಹಾಗೂ ನಮ್ಮ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಮಹಿಳಾಪಡೆಗಳು ಕೇವಲ ಬಾಡಿಗೆ ಪಡೆಗಳೇನೋ ಎನ್ನಿಸಿಬಿಟ್ಟಿವೆ. ಕಾರಣ ಕೇವಲ ತಪ್ಪು ನಡೆದ ನಾಲ್ಕು ದಿನ ಮಾತ್ರ ಹೋರಾಟ ಮಾಡಿ, ತಮ್ಮ ಪಾಡಿಗೆ ತಾವು ತೆಪ್ಪಗಿದ್ದು ಬಿಡುತ್ತಾರೆ. ಇದು ಮುಂದಿನ ತಪ್ಪಿಗೆ ಒಪ್ಪಿಗೆ ನೀಡಿದಂತಾಗಿ ಬಿಡುತ್ತದೆ. ಅದರ ಬದಲು ಒಂದು ಬಾರಿ ಹೋರಾಟಕ್ಕಾಗಿ ಬೀದಿಗೆ ಇಳಿದರೆ ಈ ಕಾನೂನು ಬದಲಾಗುವ ವರೆಗೂ ಬಿಟ್ಟು ಬಿಡದೇ ಕೆಲಸ ಮಾಡಿದಲ್ಲಿ ಆದ ತಪ್ಪುಗಳು ಮರುಕಳಿಸಿದಂತೆ ಎಚ್ಚರ ವಹಿಸಬಹುದಾಗಿದೆ. ಇತ್ತೀಚೇಗೆ ದೇಶವನ್ನು ಬೆಚ್ಚಿ ಬೀಳಿಸಿದ್ದ ಆಂಧ್ರ ಪ್ರದೇಶದ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪಾಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದರು. ಹಾಗೆಂದು ಎಲ್ಲ ಪ್ರಕರಣಗಳು ಇದೇ ರೀತಿ ಇತ್ಯರ್ಥವಾಗುತ್ತವೆಯೇ? ಖಂಡಿತ ಇಲ್ಲ. ಅಂದಮೇಲೆ ಅದಕ್ಕೆ ಪರಿಹಾರವಾಗುವಂತ ಕಾನೂನುನುಗಳು ಜಾರಿಯಾಗಬೇಕು ಅಲ್ಲವೇ? ಕೆಲವು ಅರಬ್ ದೇಶಗಳಲ್ಲಿ ಅತ್ಯಾಚಾರಿಗೆ ಸಂತಾನ ಹರಣ ಚಿಕಿತ್ಸೆಯಂತಹ ಭಯಂಕರ ಶಿಕ್ಷೆ ಇದೆ, ಮತ್ತೆ ಕೆಲವು ರಾಷ್ಟ್ರಗಳಲ್ಲಿ ನರವನ್ನೇ ಕತ್ತರಿಸಿ ಜೀವನ ಪರ್ಯಂತ ಶಂಡನಾಗಿ ಬದುಕುವಂತೆ ಮಾಡುತ್ತಾರೆ, ಮತ್ತೇ ಕೆಲವು ರಾಷ್ಟ್ರಗಳಲ್ಲಿ ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುತ್ತಾರೆ, ಇನ್ನು ಕೆಲವು ರಾಷ್ಟ್ರಗಳಲ್ಲಿ ಕಲ್ಲು ಹೊಡೆದು ಕೊಲ್ಲುತ್ತಾರೆ. ಅಂತ ಮಾದರಿಯ ಶಿಕ್ಷೆಯನ್ನು ನಮ್ಮ ಕಾನೂನಿನಲ್ಲಿಯೂ ಅಳವಡಿಸಿದರೆ ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸಬಹುದು. ಅದನ್ನು ಬಿಟ್ಟು ಬರೀ ವಿಚಾರಣೆಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡಿದರೆ ಕಾಮುಕರ ಕೇಕೆಗೆ ಮತ್ತಷ್ಟು ಬಲಿಯಾಗಬೇಕಾಗುತ್ತದೆ. 

ಸುಂದರ ಸಂಸ್ಕೃತಿ, ಸುಸಂಸ್ಕೃತ ಜನರು, ಭವ್ಯ ಪರಂಪರೆ, ಅದ್ಭುತ ಆಚಾರಗಳು, ಉನ್ನತ ವಿಚಾರಳು, ಆತ್ಮ ಬೆಳಗುವ ಆಧ್ಯಾತ್ಮ, ಮನ ಬದಲಿಸು ಧ್ಯಾನ, ಅರೋಗ್ಯ ನೀಡುವ ಯೋಗ ಹೀಗೆ ಜಗತ್ತಿನಲ್ಲಿ ತನ್ನ ಉನ್ನತವಾದ ವಿಚಾರಗಳಿಂದ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಭಾರತ ದೇಶದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಎಂದು ಅಳಿಸದ ಕಪ್ಪು ಚುಕ್ಕೆಗಳಾಗಿ ಉಳಿದು ಬಿಡುತ್ತಿವೆ. ವೀರ ಸನ್ಯಾಸಿ ವಿವೇಕಾನಂದರು ಹೇಳುವಂತೆ “ಯಾವ ದೇಶದಲ್ಲಿ ಮಹಿಳೆಯರ ಮರ್ಯಾದೆಗೆ ಸಂಚಕಾರ ಬರುತ್ತದೆಯೋ ಆ ದೇಶ ಸಿಡಿದೇಳದಿದ್ದರೆ ಅಧಃಪಥನದ ಆರಂಭವೇ ಸರಿ” ಎಂದು. ಮಹಾಭಾರತದಲ್ಲಿ ದ್ರೌಪದಿಯ ಮೇಲೆ ವಸ್ತ್ರಾಪಹರಣ ಮಾಡಿದಾಗ ಸಹೋದರ ಕೃಷ್ಣನೇ ಸೀರೆ ನೀಡಿ ಕಾಪಾಡಿದ, ಆದರೆ ನವ್ಯ ಭಾರತದಲ್ಲಿ ಅಣ್ಣಂದಿರೆ ಸೀರೆ ಸೆಳೆಯಲು ಮುಂದಾದರೆ ತಂಗಿಯನ್ನು ಕಾಪಾಡುವವರು ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಸುಂದರ ರಾಷ್ಟ್ರ ನಿರ್ಮಾಣದ ಕನಸು ಕಾಣಬೇಕಾದ ಸಮಯದಲ್ಲಿ ಭಯಾನಕ ವಾತಾವರಣ ಸೃಷ್ಠಿಮಾಡಿದರೆ ಮಹಾತ್ಮನ ಕನಸುಗಳು ಹೊಳಪು ಕಳೆದುಕೊಳ್ಳುತ್ತವೆ. ಶ್ರೇಷ್ಠ ಭಾರತದ ಕನಸನ್ನು ಸಾಕಾರಗೊಳಿಸಲು ಇಂಥ ಭಯದಿಂದ ಮಹಿಳೆಯರನ್ನು ಮುಕ್ತ ಮಾಡಿ ನಡುರಾತ್ರಿಯಲ್ಲಿಯೂ ಭಯವಿಲ್ಲದೆ ಓಡಾಡುವಂತೆ ಮಾಡಿದಾಗ ಅವರ ಕನಸುಗಳು ನನಸಾಗುತ್ತವೆ, ವಿಶ್ವವೇ ಭಾರತಕ್ಕೆ ಶಿರಭಾಗುತ್ತದೆ. 

- * * * -