ಲೋಕದರ್ಶನ ವರದಿ
ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿನ ರೈತರಿಗೆ ವನ್ಯಪ್ರಾಣಿಗಳಿಂದ ಜೀವ ರಕ್ಷಣೆ ನೀಡುವಂತೆ ಆಗ್ರಹಿಸಿ ಹಾಗೂ ಪ್ರಾಣಿಗಳಿಂದ ದಾಳಿಗೆ ಒಳಗಾದ ರೈತರಿಗೆ ಪರಿಹಾರ ನೀಡುವದು ಸೇರಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ನಗರದಲ್ಲಿ ನೂರಾರು ರೈತರು ಸೋಮವಾರ ದಿನದಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಬೋಗಾರವೇಸ್ನಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು, ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವನ್ಯಪ್ರಾಣಿಗಳಿಂದ ಸ್ವಯಂ ರಕ್ಷಣೆಗಾಗಿ ಅವುಗಳ ಮೇಲೆ ಗುಂಡು ಹಾರಿಸಲು ಅನುಮತಿ ನೀಡಬೇಕು. ಅರಣ್ಯ ಪ್ರದೇಶ ಸುತ್ತಲೂ ಬಂಡೀಪುರ ಅಭಯಾರಣ್ಯ ಮಾದರಿಯ ಕಾರಿಡಾರ್ ಯೋಜನೆ ಜಾರಿಗೊಳಿಸಬೇಕು ಎಂದರು.
ಅರಣ್ಯದ ಸುತ್ತಮುತ್ತಲಿನ ಹೊಲ ಗದ್ದೆಗಾಗಿ ರಸ್ತೆ ವ್ಯವಸ್ಥೆ ಕಲ್ಪಿಸಿ, ವನ್ಯ ಪ್ರಾಣಿಗಳಿಂದ ಹಾನಿಗೊಳಗಾಗುವ ಬೆಳೆಗಳಿಗೆ ಕನಿಷ್ಠ 25 ಸಾವಿರ ಪರಿಹಾರ, ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡಿ. ದಾಳಿಯಲ್ಲಿ ಗಾಯಗೊಳ್ಳುವವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಶ್ಚಿಮ ಘಟ್ಟ ಪ್ರದೇಶದ ರೈತರು ಆಗ್ರಹಿಸಿದರು.