ವ್ಯವಸ್ಥಿತ ವ್ಯಾಪಾರ-ವಹಿವಾಟು ನಡೆಸಿ ನಗರ ಸೌಂದರ್ಯೀಕರಣಕ್ಕೆ ಸಹಕರಿಸಿ: ಜಿಲ್ಲಾಧಿಕಾರಿ ಟಿ.ಭೂಬಾಲನ್

Inspection in corporation area by Collector...

ಜಿಲ್ಲಾಧಿಕಾರಿಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪರೀವೀಕ್ಷಣೆ 

ವಿಜಯಪುರ,ಡಿಸೆಂಬರ್ 07:  ವಿಜಯಪುರ ನಗರದ ಸೌಂದರ್ಯಿಕರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೀದಿ-ಬದಿ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ವ್ಯವಸ್ಥಿತ ಹಾಗೂ ಶಿಸ್ತುಬದ್ಧ ವ್ಯಾಪಾರ ಮಾಡುವುದು ಮತ್ತು ಎಲ್ಲೆಂದರಲ್ಲಿ ಕಸ ಚೆಲ್ಲದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ನಗರದ ಸೌಂದರ್ಯಿಕರಣಕ್ಕೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.  

ಶುಕ್ರವಾರ ನಗರದ ಜನತಾ ಬಜಾರ,  ಎಂ.ಆರ್‌.ಹೋಟೆಲ್ ಹತ್ತಿರ, ಕೆ.ಎಸ್‌.ಆರ್‌.ಟಿ.ಸಿ. ಡಿಪೋ ಪಕ್ಕ, ಪ್ರವಾಸೋದ್ಯಮ ಮಂದಿರದ ಹಿಂದೆ, ಸೈನಿಕ ಶಾಲೆ ಜಿಮ್‌ಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರೋಡ ಕ್ರೀಡಾಂಗಣದ ಹತ್ತಿರ ಗುರುತಿಸಲಾಗಿರುವ ವೆಂಡಿಂಗ್ ಜೋನ್ ಜಾಗಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.  

ವಿಜಯಪುರ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ವಾಣಿಜ್ಯ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು, ಉದ್ದಿಮೆದಾರರು ಕಸವನ್ನು ರಸ್ತೆಯ ಮೇಲೆ ಎಸೆಯದೇ ಕಸ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ನೀಡಬೇಕು. ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆಯಬೇಕು ಎಂದು ಅವರು ಹೇಳಿದರು.  

ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.