ನಾವೆಲ್ಲರೂ ಸಹಬಾಳ್ವೆಯಿಂದ ಬದುಕುವುದು ಅತ್ಯವಶ್ಯಕವಾಗಿದೆ: ಪ್ರೊ.ಶಾಂತಾದೇವಿ ಟಿ

It is essential that we all live in harmony: Prof. Shantadevi T.

ವಿಜಯಪುರ 22: ನಾವೆಲ್ಲರೂ ಶಾಂತಿಯುತವಾಗಿ, ಸಹಬಾಳ್ವೆಯಿಂದ ಹಾಗೂ ನೆಮ್ಮದಿಯಿಂದ ಬದುಕುವುದು ಇಂದು ಅತ್ಯವಶ್ಯಕವಾಗಿದೆ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಹೇಳಿದರು. ಯಿ 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌.ಎಸ್‌.ಎಸ್ ಕೋಶದ ಸ್ನಾತಕ, ಶಿಕ್ಷಣ, ಆ. ಬ. ಮತ್ತು ಮುಕ್ತ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಭಯೋತ್ಪಾದನಾ ವಿರೋಧಿ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಒಂದು ಸಮರ್ಥ ಸಮಾಜ ಕಟ್ಟುವಲ್ಲಿ ಶಾಂತಿ ಪ್ರಮುಖ ಪಾತ್ರ ವಹಿಸುತ್ತದೆ. ನಾವೆಲ್ಲರೂ ಯಾವ ಧರ್ಮ, ಜಾತಿ ಅಥವಾ ಪ್ರದೇಶದವರಾಗಿದ್ದರೂ, ಭಯೋತ್ಪಾದನೆಯನ್ನು ಒಟ್ಟಾರೆ ಖಂಡಿಸಬೇಕು. ಶಾಂತಿಯನ್ನು ಉತ್ತೇಜಿಸುವಂಥ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಹಾನುಭೂತಿ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಬೇಕು. ಇಂಥ ಪ್ರಜ್ಞೆಯೇ ಭವಿಷ್ಯದಲ್ಲಿ ಭದ್ರವಾದ, ಶಾಂತಿಪೂರ್ಣ ಸಮಾಜ ನಿರ್ಮಿಸಲು ದಾರಿ ತೋರಿಸಬಲ್ಲದು ಎಂದರು. 

ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ನಾವು ನಮ್ಮ ಸಹಬಾಂಧವರೊಂದಿಗೆ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ನಿಷ್ಠೆಯಿಂದ ಯತ್ನಿಸುತ್ತೇವೆ. ಮಾನವೀಯ ಮೌಲ್ಯಗಳು ಮತ್ತು ಜೀವಮಾನಕ್ಕೆ ಬೆದರಿಕೆ ಉಂಟುಮಾಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಾವು ದೃಢನಿಶ್ಚಯದಿಂದ ಹೋರಾಡುವ ಪಣ ತೊಡುತ್ತೇವೆ ಎಂದು ಪ್ರಮಾಣ ವಚನವನ್ನು ಬೋಧಿಸಿದರು. 

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್‌.ಎಮ್‌.ಚಂದ್ರಶೇಖರ, ಪ್ರಾಧ್ಯಾಪಕರಾದ ಪ್ರೊ. ಪಿ, ಜಿ. ತಡಸದ, ಪ್ರೊ.ನಾಮದೇವ ಗೌಡ, ಡಾ.ಕಿರಣ, ಎನ್‌.ಎಸ್‌.ಎಸ್ ಕೋಶದ ಸಂಯೋಜಕ ಪ್ರೊ. ಅಶೋಕಕುಮಾರ ಸುರಪುರ, ಎನ್‌.ಎಸ್‌.ಎಸ್ ಘಟಕಗಳ ಕಾರ್ಯಕ್ರಮ ಅಧಿಕಾರಿ ಡಾ.ಗುಲಾಬ ರಾಠೋಡ, ಡಾ.ಅಮರನಾಥ ಪ್ರಜಾಪತಿ ಹಾಗೂ ಎನ್‌.ಎಸ್‌.ಎಸ್ ಘಟಕಗಳ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಡಾ. ಕಲಾವತಿ ಎಚ್‌. ಕಾಂಬಳೆ ಸ್ವಾಗತಿಸಿ ವಂದಿಸಿದರು.