ಖೇಲೋ ಇಂಡಿಯಾ ದೇಶದ ಕ್ರೀಡಾಪಟುಗಳನ್ನು ಉತ್ತೇಜಿಸಿದೆ: ಮಹಾಂತೇಶ ಕವಟಗಿಮಠ ಲಿಂಗರಾಜ ಕಾಲೇಜಿನಲ್ಲಿ ಅಂತರ್ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ

Khelo India has encouraged the country's athletes: Mahantesh Kavatagimath Inter-college football t

ಲೋಕದರ್ಶನ ವರದಿ 

ಖೇಲೋ ಇಂಡಿಯಾ ದೇಶದ ಕ್ರೀಡಾಪಟುಗಳನ್ನು ಉತ್ತೇಜಿಸಿದೆ: ಮಹಾಂತೇಶ ಕವಟಗಿಮಠ  

ಲಿಂಗರಾಜ ಕಾಲೇಜಿನಲ್ಲಿ ಅಂತರ್ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ 


ಬೆಳಗಾವಿ 18: ಭಾರತ ವಿಶ್ವಗುರುವಾಗಬೇಕೆಂಬ ಉದ್ದೇಶದಿಂದ ಖೇಲೋ ಇಂಡಿಯಾವನ್ನು ಕೇಂದ್ರ ಸರಕಾರ ಹುಟ್ಟುಹಾಕಿದ್ದು ಕ್ರೀಡೆಗೆ ಆ ಮೂಲಕ ಇಂದು ಹೆಚ್ಚಿನ ಸ್ಫೂರ್ತಿ ನೀಡುತ್ತಿದೆ. ಗೆಲುವು ಸಾಧನೆಯಲ್ಲ; ಭಾಗವಹಿಸುವುದು ಸಾಧನೆ. ಭಾರತದ ಯುವಕ್ರೀಡಾಪಟುಗಳು ವಿದೇಶಗಳಲ್ಲಿ ಭಾಗವಹಿವಂತಾಗಬೇಕು. ಅಂದಾಗ ಮಾತ್ರ ಕ್ರೀಡೆಗೆ ಮಹತ್ವ ಬರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕೆಎಲ್‌ಇ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಹೇಳಿದರು. 

ಅವರು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯವು ಆಯೋಜಿಸಿದ್ದ ಅಂತರ್ ಕಾಲೇಜು ಫುಟ್‌ಬಾಲ್ ‘ಲಿಂಗರಾಜ ಕಫ್ ಸಿಜನ್‌-2’ ಪಂದ್ಯಾವಳಿಗೆ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.  

ಇಂದು ಭಾರತ ಸರ್ಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜವನ್ನು ನೀಡುತ್ತಿದ್ದು, ಖೇಲೋ ಇಂಡಿಯಾ ಯುವ ಕ್ರೀಡಾಪಟುಗಳಿಗೆ ಒಂದು ವೇದಿಕೆಯನ್ನು ಕಲ್ಪಿಸಿದೆ. ಅದರ ಪ್ರಯೋಜವನ್ನು ಪಡೆದು ಅಂತರಾಷ್ಟ್ರೀಯಮಟ್ಟದ ಸಾಧನೆಯನ್ನು ಮಾಡಬೇಕಾಗಿದೆ.  ಕೆಎಲ್‌ಇ ಸಂಸ್ಥೆಯು ಕ್ರೀಡೆಗಾಗಿ ಹೆಚ್ಚು ಆದ್ಯತೆಯನ್ನು ನೀಡಿದೆ. ಅನೇಕ ಕ್ರೀಡಾಪಟುಗಳನ್ನು ತರಬೇತಿಗೊಳಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ತೊಡಗಿಸಿ ಸಾಧನೆಗೈದಿದೆ. ಕ್ರೀಡಾ ಅಕಾಡೆಮಿ ಸ್ಥಾಪಿಸುವುದು ಕೆಎಲ್‌ಇ ಸಂಸ್ಥೆಯ ಗುರಿಯಾಗಿದೆ. ಅದನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು. ಲಿಂಗರಾಜ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಿ ಉತ್ತೇಜಿಸಿದೆ. ಕಾಲೇಜು ಅನೇಕ ಯುನಿವರ್ಸಿಟಿ ಬ್ಲೂಗಳನ್ನು ರೂಪಿಸಿರುವುದು ಅಭಿನಂದನೀಯ ಎಂದು ಮಹಾಂತೇಶ ಕವಟಗಿಮಠ ಮೆಚ್ಚುಗೆ ವ್ಯಕ್ತಪಡಿಸಿದರು.  

ಲಿಂಗರಾಜ ಮಹಾವಿದ್ಯಾಲಯದ ಕಳೆದ ವರ್ಷವೂ ಕೂಡ ಅಂತರ್ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಿ ಗಮನಸೆಳೆದಿತ್ತು. ಈ ಸಲ ಮತ್ತೆ ಆಯೋಜಿಸಿ ಯುವ ಫುಟ್‌ಬಾಲ್ ಪಟುಗಳಿಗೆ ವೇದಿಕೆಯನ್ನು ಕಲ್ಪಿಸಿದೆ. 

ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮ ರಾವ್, ಡಾ.ರೀಚಾ ರಾವ್, ವಿನಾಯಕ ವರೂಟೆ ಹಾಗೂ ಪ್ರಾಯೋಜಕತ್ವ ನೀಡಿದ ರಾಯಲ್ ಮಂಡಿ, ಲಾನ್ಸ್‌ ಸ್ಫೋರ್ಟ್ಸ, ಮಥಿನ್ ಇನಾಮದಾರ, ಟೀ ಟೋಸ್ಟ್‌ ಕಂಪನಿ ಅಕ್ಷಯ ಕಠಾರಿಯಾ, ಮಿಂಟ್ ಮೀಡಿಯಾದ ಪ್ರಮುಖರು ಉಪಸ್ಥಿತರಿದ್ದರು. ಕೊಲ್ಲಾಪುರ, ಗಡ್ಲಿಂಜ್, ನ್ಯಾಷನಲ್ ಫಾರೆನ್ಸಿಕ್ ಸೈನ್ಸ್‌ ವಿವಿ, ಧಾರವಾಡ, ಬೆಳಗಾವಿ ಮೊದಲ್ಗೊಂಡು 20 ತಂಡಗಳು ಪಾಲ್ಗೊಂಡಿದ್ದವು. ಖುಷಿ ಹರದಿ ಪ್ರಾರ್ಥಿಸಿದರು. ಸಂಸ್ಕೃತಿ ನಾಯರ್ ನಿರೂಪಿಸಿದರು. ಸಮೃದ್ಧಿ ಕುಡಚಿ ವಂದಿಸಿದರು.