ಲೋಪ ದೋಷವಿಲ್ಲದ ಮತದಾರರ ಪಟ್ಟಿ ಸಿದ್ಧತೆಗೆ ಸಹಕರಿಸಿ: ಮೇಘಣ್ಣವರ

ರಾಯಬಾಗ 04: ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿ ಮತಕ್ಷೇತ್ರದಲ್ಲಿ ದೋಷ ಇಲ್ಲದ ಮತದಾರರ ಯಾದಿ ತಯಾರಿಸುವ ಗುರಿಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪರೀಶಿಲನೆ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ತಿಳಿಸಿದರು. 

ಶನಿವಾರ ಸಾಯಂಕಾಲ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಪ ದೋಷ ಇಲ್ಲದ ಮತದಾರರ ಪಟ್ಟಿ ಸಿದ್ದಪಡಿಸಲು ನಾಗರೀಕರು ಮತ್ತು ರಾಜಕೀಯ ಪಕ್ಷದವರು ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದರು. ನಿಧನ ಹೊಂದಿದವರು, ಒಬ್ಬರ ಹೆಸರು ಗ್ರಾಮೀಣ ಮತ್ತು ನಗರ ಎರಡು ಕಡೆಗಳಲ್ಲಿ ಇರುವುದು ಕಂಡು ಬಂದಿದೆ. ಅವುಗಳನ್ನು ತೆಗೆದು ಹಾಕಿ ಸರಿಪಡಿಸಲು ಬಿಎಲ್ಒ ಗಳಿಗೆ ಸೂಚಿಸಲಾಗಿದೆ. 

ಕೆಲವೊಂದು ಬಿಎಲ್ಒ ಗಳು ಮನೆಮನೆಗಳಿಗೆ ತೆರಳಿ ಪರೀಶಿಲನೆ ನಡೆಸಿ ಮಾಹಿತಿ ನೀಡಿಲ್ಲ. ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದೇನೆ. ಬಿಎಲ್ಒಗಳಿಗೆ ಮತ್ತು ಡಾಟಾ ಎಂಟ್ರಿ ಆಪರೇಟಗಳಿಗೆ ಗುಣಮಟ್ಟದ ತರಬೇತಿ ನೀಡುವಂತೆ ತಿಳಿಸಿರುವುದಾಗಿ ಹೇಳಿದರು. 

ರಾಯಬಾಗ ಮತಕ್ಷೇತ್ರದ ನಾಗರಮುನ್ನೋಳ್ಳಿ, ಕಬ್ಬೂರ, ಹುಬ್ಬರವಾಡಿ ಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದ ಆಯುಕ್ತರು, ಸಾಯಂಕಾಲ ಕುಡಚಿ ಮತಕ್ಷೇತ್ರದಲ್ಲಿ ಪರೀಶಿಲನೆ ನಡೆಸಲು ತೆರಳಿದರು.

ಉಪವಿಭಾಗಾಧಿಕಾರಿ ಪ್ರವೀಣ ಬಾಗೇವಾಡಿ, ತಹಶೀಲ್ದಾರ ಡಿ.ಎಸ್.ಜಮಾದಾರ, ಗ್ರೇಡ್ 2 ತಹಶೀಲ್ದಾರ ಬಸಪ್ಪ ಪೂಜಾರ, ತಹಶೀಲ್ದಾರ ಸಿಬ್ಬಂದಿ ಪ್ರಶಾಂತ ಪಾಟೀಲ, ವಿನಾಯಕ ಭಾಟೆ ಸೇರಿದಂತೆ ಇತರರು ಇದ್ದರು.