ಬಳ್ಳಾರಿ 27: ಸಂವಿಧಾನದಲ್ಲಿ ಎಲ್ಲರೂ ಸಮಾನರು. ವಿಶೇಷವಾಗಿ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಸೇವೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.ಗುರುವಾರ, ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಂರ್ಕೀಣದ 3 ನೇ ಮಹಡಿಯ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ “ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಯೋಜನೆ 2024 ಮತ್ತು ಮಾನಸಿಕ ಅಸ್ವಸ್ಥಕ ಹೊಂದಿರುವ ವ್ಯಕ್ತಿ ಮತ್ತು ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗೆ ಕಾನೂನು ಸೇವೆಗಳ ಯೋಜನೆ 2024” ಕುರಿತು ಆಯೋಜಿಸಿದ್ದ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳು ಸಮಾಜದಲ್ಲಿ ಘನತೆ, ಗೌರವದಿಂದ ಬದುಕುವ ಹಕ್ಕಿದೆ. ಇಂತಹ ಮಕ್ಕಳಿಗಾಗಿ ಸೌಕರ್ಯಗಳನ್ನು ಪಡೆಯಲು ವಿಶೇಷವಾದ ಕಾನೂನುಗಳಿವೆ ಎಂದು ತಿಳಿಸಿದರು.ಬಾಲ್ಯ ವಿವಾಹವಾದವರು, ಶಿಕ್ಷಣದಿಂದ ವಂಚಿತರಾದ ಮಕ್ಕಳು, ಅಂಗವಿಕಲ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವಾಗಬೇಕು. ಇದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಂತಹ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡು ಆತ್ಮವಿಶ್ವಾಸ ತುಂಬುವುದು ಪೋಷಕರ ಆದ್ಯ ಜವಬ್ದಾರಿಯಾಗಿದೆ ಎಂದರು.ರಾಜ್ಯದಲ್ಲಿ ಅಂಗವಿಕಲತೆ ಹೊಂದಿರುವ ಶೇ.14.9 ಪುರುಷರು, ಶೇ.11.9 ಮಹಿಳೆಯರು ಹಾಗೂ ಮಾನಸಿಕ ಅಸ್ವಸ್ಥತೆ ಹೊಂದಿದ ಶೇ.2.41 ಪುರುಷರು, ಶೇ.2.01 ಮಹಿಳೆಯರು ಹಾಗೂ ಶೇ.0.89 ಮಕ್ಕಳು ಇದ್ದಾರೆ ಎಂದು ಮಾಹಿತಿ ನೀಡಿದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ನಮ್ಮ ಸಂವಿಧಾನದಲ್ಲಿ ಮಕ್ಕಳಿಗಾಗಿ ಮತ್ತು ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ವಿಶೇಷವಾದ ಕಾಯ್ದೆಗಳು ಇವೆ. ಸರಿಯಾದ ರೀತಿಯಲ್ಲಿ ಕಾನೂನು ಸೇವೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹಡಗಲಿ ರಾಮು, ರೀಡ್ಸ್ ಸಂಸ್ಥೆಯ ನಿರ್ದೇಶಕರಾದ ತಿಪ್ಪೇಶ್ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು ಹಾಗೂ ಇತರರು ಉಪಸ್ಥಿತರಿದ್ದರು.