ತಪ್ಪಿತಸ್ಥರಿಗೆ ವಿರುದ್ಧ ಕ್ರಮ ಜರುಗಿಸೋಣ
ಧಾರವಾಡ 22: 2024-25 ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 28 ಬಾಲ್ಯ ವಿವಾಹವನ್ನು ತಡೆಗಟ್ಟಿದ್ದಾರೆ. 18 ಎಫ್‌ಐಆರ್ ದಾಖಲಾಗಿವೆ. ಬಾಲ್ಯವಿವಾಹ ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಲು ಸರಕಾರ ಮತ್ತು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿವೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ನಿನ್ನೆ (ಮೇ. 21) ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಬಾಲ್ಯವಿವಾಹ ಪದ್ಧತಿ ಕುರಿತು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಅವರ ಕುಟುಂಬದ ಜೊತೆಗೆ ಅಥವಾ ಬಾಲಕಿಯರ ಬಾಲ ಮಂದಿರದಲ್ಲಿ ಅಥವಾ ತೆರೆದ ತಂಗುದಾಣದಲ್ಲಿ ಇದ್ದರೂ ಸಹ ಅವರಿಗೆ ಶಿಕ್ಷಣ ದೊರೆಯುವ ರೀತಿಯಲ್ಲಿ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳ ಮನೆಗೆ ಅಧಿಕಾರಿಗಳು ಭೇಟಿ ನೀಡಿ, ಅವರೊಂದಿಗೆ ಆಪ್ತ ಸಮಾಲೋಚನೆಯನ್ನು ಸತತವಾಗಿ ಮಾಡುತ್ತಿರಬೇಕು. ಅಷ್ಟೇ ಅಲ್ಲದೆ ಸ್ವಯಂ ಉದ್ಯೋಗ ಮಾಡಬಯಸುವವರಿಗೆ ಸರಕಾರದ ಸೌಲಭ್ಯಗಳನ್ನು ನೀಡಿ, ಅವರು ಆರ್ಥಿಕವಾಗಿ ಉತ್ತಮರಾಗುವಂತೆ, ಸಮಾಜದಲ್ಲಿ ಬದುಕಲು ಅನುಕೂಲವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ಹೇಳಿದರು.
ಬಾಲ್ಯ ವಿವಾಹಕ್ಕೆ ಒಳಪಟ್ಟವರನ್ನು ರಕ್ಷಿಸಿದ ನಂತರ ಅವರು ಉನ್ನತ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿರುವವರನ್ನು ಗುರುತಿಸಿ, ಅವರಿಂದ ಒಂದು ಕಾರ್ಯಗಾರವನ್ನು ಏರಿ್ಡಸಬೇಕು ಎಂದು ಸಿಇಓ ಭುವನೇಶ ಪಾಟೀಲ ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಗ್ರಾಮ ಪಂಚಾಯತ ಮಟ್ಟದಿಂದಲೇ ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಮಾಡುವಂತಹ ಕೆಲಸವಿದು. ಬಾಲ್ಯ ವಿವಾಹ ನಡೆಯುತ್ತಿದೆ ಎಂದು ನಿಮಗೆ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿ ಪರೀಶೀಲನೆ ನಡೆಸಿ, ಅದು ಬಾಲ್ಯ ವಿವಾಹವೇ ಎಂದು ಖಚಿತಪಡಿಸಿಕೊಂಡು ನಂತರ ನೀವು ಅದನ್ನು ಹತ್ತಿರವಿರುವ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ಮಾಡಿಸಬೇಕು ಎಂದು ಅವರು ತಿಳಿಸಿದರು.
ಒಂದು ವೇಳೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಮಾಡಿಕೊಳ್ಳದಿದ್ದರೆ ಅದನ್ನು ಎಸ್‌ಪಿ ಅಥವಾ ಕಮಿಷನರ್ ಅವರ ಗಮನಕ್ಕೆ ತರುವಂತಹ ಕೆಲಸ ಮಾಡಬೇಕು ಎಂದರುಬೇರೆ ಜಿಲ್ಲೆಯವರು ಆಗಿದ್ದರೆ ಅವರನ್ನು ಕೂಡ ಹತ್ತಿರವಿರುವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆನಂತರ ಪೊಲೀಸರು ಸಂಬಂಧಪಟ್ಟ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.(ಫೋಟೊ ಇವೆ)