ವಿಜಯಪುರ,ಮಾ.28 : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದವರಿಗೆ ಸತತವಾಗಿ ಉದ್ಯೋಗ ಕಲ್ಪಿಸುವ ಅಂಗವಾಗಿ ಜಿಲ್ಲಾ ಪಂಚಾಯತಿ ವತಿಯಿಂದ ದುಡಿಯೋಣ ಬಾ ಅಭಿಯಾನ ಆಯೋಜಿಸಲಾಗಿದೆ. ಮಾರ್ಚ್ 15 ರಿಂದ ಜಿಲ್ಲೆಯ 13 ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನ ಯಶಸ್ವಿಯಾಗಿ ಆರಂಭವಾಗಿದ್ದು, ಜೂನ್ ಮಾಹೆಯ ಅಂತ್ಯದವರೆಗೆ ಈ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.
ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದೆ. ಬೇಸಿಗೆ ಅವಧಿಯಲ್ಲಿ 100 ದಿನ ಕೆಲಸ ನಿರ್ವಹಿಸಿದ್ದಲ್ಲಿ ರೂ.37,000/- ಪಾವತಿಯಾಗುತ್ತದೆ. ಅಲ್ಲದೇ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಕೂಲಿ ದರವನ್ನು ಏಪ್ರಿಲ್ 1 ರಿಂದ ರೂ. 349 ರಿಂದ ರೂ. 370ಕ್ಕೆ ಹೆಚ್ಚಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂದು ಅವರು ಹೇಳಿದರು.
ಅಭಿಯಾನದ ಉದ್ದೇಶ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಕುಶಲ ಕಾರ್ಮಿಕರಿಗೆ ನಿರಂತರವಾಗಿ ಮೂರು ತಿಂಗಳವರೆಗೆ ಉದ್ಯೋಗ ಒದಗಿಸುವುದು. ಕೂಲಿ ಆಧಾರಿತ ಕಾಮಗಾರಿಗಳನ್ನು ಸೃಜಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು. ವಿಶೇಷ ಚೇತನತರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಗ್ಗಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕೃಷಿ ಭೂಮಿಯಲ್ಲಿ ಮಣ್ಣಿನ ಸವಕಳಿ ತಡೆದು ಫಲವತ್ತತೆ ಹೆಚ್ಚಿಸಲು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳ ಅನುಷ್ಟಾನ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿಗಳು, ಬತ್ತಿಹೋದ ಕುಡಿಯುವ ನೀರಿನ ಕೊಳವೆ ಬಾವಿಗಳ ಸುತ್ತ ಮಳೆ ನೀರು ಮರುಪೂರಣ ಘಟಕ ನಿರ್ಮಾಣ ಮತ್ತು ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗಳ ಅನುಷ್ಟಾನ, ರಸ್ತೆ ಬದಿ ನೆಡುತೋಪು, ನಾಲಾ ಹೂಳೆತ್ತುವುದು, ಬೋಲ್ಡರ್ ಚೆಕ್, ಬಸಿಗಾಲುವೆ ನಿರ್ಮಾಣ ಮತ್ತು ಇತರೆ ರೈತರ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಟಾನ ಮಾಡುವುದು.
ಐಇಸಿ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಜನರಿಗೆ ಯೋಜನೆ ಬಗ್ಗೆ ಅರಿವು, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಾರ್ಡ-ಗ್ರಾಮ ಸಭಾ ಆಯೋಜಿಸಿ ಯೋಜನೆಯ ಸೌಲಭ್ಯಗಳ ಬಗ್ಗೆ, ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಯೋಜನೆ ಕುರಿತು ಅರಿವು ಮೂಡಿಸಿ ಮಹಿಳೆಯರನ್ನು ಹೆಚ್ಚಾಗಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸುತ್ತಿದ್ದು, ಉದ್ಯೋಗ ಚೀಟಿ ಹೊಂದಿಲ್ಲದ ಕುಟುಂಬಗಳು ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಹೊಸದಾಗಿ ಉದ್ಯೋಗ ಚೀಟಿಗಳನ್ನು ಪಡೆಯಬೇಕು, ಪರಿಶಿಷ್ಟಜಾತಿ- ಪರಿಶಿಷ್ಟ ಪಂಗಡ, ಭೂರಹಿತ ಕುಟುಂಬ, ಸಣ್ಣ ಮತ್ತು ಅತಿಸಣ್ಣ ರೈತರು, ವಿಶೇಷ ಚೇತನರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕೂಲಿ ಕೆಲಸ ಕಲ್ಪಿಸಲಾಗುವುದು ಎಂದರು.
ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರನ್ನೊಳಗೊಂಡು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ.60 ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಎಲ್ಲ ಯೋಜನೆಗಳ ಮಾಹಿತಿಗಾಗಿ, ಏಕೀಕೃತ ಸಹಾಯವಾಣಿ ಸಂಖ್ಯೆ: 8277506000 ಹಾಗೂ ಜಿಲ್ಲಾ ಪಂಚಾಯತಿಯ ನರೇಗಾ ಸಹಾಯವಾಣಿ ಸಂಖ್ಯೆ: +91 94808 31699 ಗೆ ಸಂಪರ್ಕಿಸಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024-25 ಸಾಲಿನಲ್ಲಿ ಜಿಲ್ಲೆಯಲ್ಲಿ 1,58,119 ಕುಟುಂಬಗಳ ಪೈಕಿ ಒಟ್ಟು 2,54,912 ಕೂಲಿ ಕಾರ್ಮಿಕರು ಮನರೇಗಾಯೋಜನೆಯಡಿ ಉದ್ಯೋಗ ಪಡೆದಿದ್ದಾರೆ.