ಓದು ಎನ್ನುವದು ತಿಳುವಳಿಕೆಗೆ, ಜ್ಞಾನಾರ್ಜನೆಗೆ ಮುಖ್ಯವಾದುದು. ನಾವು ವಿದ್ಯಾಭ್ಯಾಸವನ್ನು ಎಷ್ಟು ಮಾಡುತ್ತೇವೆ ಎನ್ನುವುದಕ್ಕಿಂತ ವಿದ್ಯೆಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವದು ಬಹಳ ಮುಖ್ಯವಾಗುತ್ತದೆ. ಒಂದು ಪುಸ್ತಕವನ್ನು ಮೊಗಚಿ ಹಾಕುವುದು ಬೇರೆ. ಪ್ರತೀ ವಾಕ್ಯವನ್ನು ಅರ್ಥ ಮಾಡಿಕೊಂಡು ತಿರುವಿ ಹಾಕುವುದು ಬೇರೆ. ಕಥೆ ಎಂದು ಓದುವುದು ಬೇರೆ ಕಥೆಯ ಆಳ ವಿಸ್ತಾರ ಅದರ ಭಾವ ತಿಳಿದುಕೊಳ್ಳುವುದು ಬೇರೆ. ಹಾಗಾಗಿ ಓದು ಎಂದರೆ ಕೇವಲ ಪಿಯುಸಿಯೋ, ಡಿಗ್ರಿಯೋ, ಇಂಜೀನೀಯರೋ್ರ ಮಾತ್ರವಲ್ಲ. ಜ್ಞಾನವನ್ನು ಸಂಪಾದಿಸ್ತಾ ಹೋದಂತೆ, ಒಂದೊಂದು ಹಂತಕ್ಕೆ ಹೆಸರನ್ನು ಇಟ್ಟುಕೊಂಡಿದ್ದೇವೆ. ಡಿಗ್ರಿ ತೆಗೆದುಕೊಂಡ ಮಾತ್ರಕ್ಕೆ ಆತ ಆ ವಿಷಯದಲ್ಲಿ ಜ್ಞಾನಿ ಎಂದು ಹೇಳಲಾಗುವುದಿಲ್ಲ. ಅದರಲ್ಲಿಯೂ ಕಾಸು ಕೊಟ್ಟು ಡಿಗ್ರಿಯನ್ನು ಸಂಪಾದಿಸುವ ಕಾಲ ಬಂದ ಮೇಲೆ ವಿದ್ಯೆಗೆ ಬೆಲೆ ಇರುವುದು ಕೇವಲ ಹಣ ಸಂಪಾದಿಸಲು ಎನ್ನುವಂತಾಗಿದೆ.
ವಿದ್ಯೆಗೂ ಬುದ್ದಿಗೂ ತುಂಬಾ ವ್ಯತ್ಯಾಸವಿದೆ. ಒಬ್ಬ ದಾರಿಹೋಕನಿಗೆ ನದಿಯೊಂದು ಎದುರಾಯಿತು. ಆ ನದಿ ದಾಟಬೇಕು ಎಂದರೆ ದೋಣಿ ಹತ್ತಬೇಕು. ಸನಿಹದಲ್ಲಿ ಒಬ್ಬ ಅಂಬಿಗನು ದೋಣಿಯನ್ನು ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಕಾದಿದ್ದ. ಈ ದಾರಿಹೋಕ ಅವನ ಬಳಿ ಹೋಗಿ ತಾನು ನದಿ ದಾಟಬೇಕಿದೆ ಎಂದ. ಅದಕ್ಕೆ ಅಂಬಿಗ ಸ್ವಾಮಿ ಇನ್ನೊಬ್ಬರು ಬಂದರೆ ಒಳಿತು. ಒಮ್ಮೆಯೇ ನದಿ ದಾಟಿಸಿಬಿಡುತ್ತೇನೆ. ನೀವು ದೋಣಿ ಹತ್ತಬಹುದು ಎಂದ. ಅವನ ಆ ಮಾತಿಗೆ ಬೇರೆ ಮಾತಾಡದ ಈ ವ್ಯಕ್ತಿ ಈತನಿಗೆ ನದಿಯ ಬಗ್ಗೆ ಜ್ಞಾನ ಇರಬಹುದು, ದೋಣಿಯ ಹುಟ್ಟನ್ನು ಹೇಗೆ ತಿರುಗಿಸಬೇಕು ಎನ್ನುವ ಕಲ್ಪನೆಗಳಿರುತ್ತವೆ ಎನ್ನುವ ನಂಬಿಕೆಯಲಿ ದೋಣಿ ಹತ್ತಿ ಕುಳಿತ. ಅಷ್ಟರಲ್ಲಿ ಮತ್ತೊಬ್ಬಾತನೂ ಬಂದ. ಇವನೂ ಸಹ ದೋಣಿಗನಲ್ಲಿ ತಾನು ನದಿ ದಾಟಬೇಕು ಎಂದ. ಅದಕ್ಕೆ ಅಂಬಿಗೆ ಒಪ್ಪಿದ. ಆದರೆ ಈ ವ್ಯಕ್ತಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ನಾನು ಯಾರು ಅಂತ ತಿಳಿದಿದ್ದೀಯೆ. ವಿದ್ವತ್ತನ್ನು ಬಲ್ಲವನು. ನನಗೆ ಗುರುಗಳಿಂದ ಶಹಬ್ಬಾಶ್ ಗಿರಿ ಸಿಕ್ಕಿದೆ. ನಾನು ಕಲಿತ ವಿದ್ಯೆಗೆ ಇಡೀ ನನ್ನ ಕುಲವೆ ಹೆಮ್ಮೆ ಪಡುತ್ತದೆ. ನಿನಗೆ ಇದರ ಬಗ್ಗೆ ಏನಾದರೂ ಗೊತ್ತಿದೆಯೇನು ಎಂದು ಕೇಳಿದ. ಅದಕ್ಕೆ ಅಂಬಿಗ ಅಯ್ಯಾ ನನಗೆ ದೋಣಿ ನಡೆದುವುದು ಬಿಟ್ಟು ಬೇರೆನೂ ಗೊತ್ತಿಲ್ಲ ನೀವೆ ಮಹಾತ್ಮರು” ಎನ್ನುತ್ತ ಆ ವ್ಯಕ್ತಿಯನ್ನು ದೋಣಿಗೆ ಹತ್ತಿಸಿದ.
ಅವರ ಸಂಭಾಷಣೆಯನ್ನು ಆಲಿಸುತ್ತಿದ್ದ ಮೊದಲು ಬಂದ ವ್ಯಕ್ತಿ. “ಸ್ವಾಮಿ ನೀವು ಹೇಳುತ್ತಿರುವುದು ಕೇಳಿ ಬಹಳ ಸಂತೋಷವಾಯಿತು. ನಾನು ಕೂಡ ಪಂಡಿತನೇ ಇರುತ್ತೇನೆ. ಆದರೆ ನನ್ನ ಪ್ರಕಾರ ಈ ಪಂಡಿತತನ ಈ ನದಿಯಲ್ಲಿ, ದೋಣಿಯಲ್ಲಿ ಕುಳಿತಾಗ ಪ್ರಯೋಜನಕ್ಕೆ ಬರಲಿಕ್ಕಿಲ್ಲ ಅಂದುಕೊಳ್ಳುತ್ತೇನೆ. ನಮ್ಮ ವಿದ್ಯಾ ಪಂಡಿತ್ತು ಬೇರೆ. ಇವರ ವಿದ್ಯಾ ಪಂಡಿತ್ತು ಬೇರೆ. ನಮ್ಮದು ಅವರಿಗೆ ಬರುವುದಿಲ್ಲ. ಅವರದ್ದು ನಮಗೆ ತಿಳಿದಿಲ್ಲ. ಹಾಗಾಗಿ ಇಲ್ಲಿ ಎಲ್ಲರೂ ಸಮಾನರು” ಎಂದ. ಅದಕ್ಕೆ ಎರಡನೇ ವ್ಯಕ್ತಿ ಸುಮ್ಮನಾಗದೇ ಅದೆಲ್ಲ ಹೇಗೆ ಸಾಧ್ಯ ನಾನು ಕಲಿತ ವಿದ್ಯೇಯೇ ಶ್ರೇಷ್ಠ. ನೀರಿನಲ್ಲಿ ಹುಟ್ಟು ಹಾಖಿದರೆ ದೋಣಿ ಚಲಿಸುತ್ತದೆ. ಈ ಕೆಲಸವೇನು ಮಹಾ. ಹೌದು, ನೀವು ಏನು ಕಲಿತಿದ್ದೀರಿ. ನಿಮ್ಮನ್ನು ನೋಡಿದರೆ ಪುರೋಹಿತರಂತೆ ಕಾಣಿಸುತ್ತದೆ” ಎಂದ ಸೊಕ್ಕಿನಿಂದ.
“ನಾನು ಪುರೋಹಿತ ಶಿಕ್ಷಕ. ನೀನು ಕಲಿತ ವಿದ್ಯೆಗೆ ಶಿಕ್ಷಕನಾದವನು. ನನ್ನ ಜಾಗದಲ್ಲಿ ಬೇರೆಯವರು ಇದ್ದಿರುತ್ತಾರೆ. ಆದರೆ ನನಗೆ ಅವಮಾನ ಮಾಡಿದರೆ ನೀನು ನಿನ್ನ ಶಿಕ್ಷಕರಿಗೆ ಅವಮಾನ ಮಾಡಿದಂತೆ” ಎಂದು ತಿಳಿ ಹೇಳಲು ಪ್ರಯತ್ನಿಸಿದ. ಅದಕ್ಕೆ ಅವನು ಜೋರಾಗಿ ನಗತೊಡಗಿದ. ದೋಣಿ ಅಲುಗಾಡತೊಡಗಿತ್ತು. ನದಿಯ ಮಧ್ಯ ಚಲಿಸುತ್ತಿದ್ದ ದೋಣಿಗೆ ಬಲವಾದ ಗಾಳಿಯೂ ಬೀಸಲಾರಂಭಿಸಿತು. ದೋಣಿ ಎರಡು ಸುತ್ತು ಗಿರಗಿರ ತಿರುಗಿತು.
ಅಂಬಿಗ ನುಡಿದ. ದೋಣಿ ಮುಳುಗುವ ಸೂಚನೆ ಕಾಣಿಸುತ್ತಿದೆ. ನದಿಗೆ ಹಾರಿ ಈಜಿಕೊಂಡು ದಡವನ್ನು ಸೇರಿಕೊಳ್ಳಿ. ಈ ನದಿಗೆ ಬೇಕಿರುವ ವಿದ್ಯೆ ಈಜುವುದೇ ಆಗಿದೆ” ಎಂದು ಅಂಬಿಗ ನದಿಗೆ ಹಾರಿದ. ಅಷ್ಟರಲ್ಲೇ ದೋಣಿ ಮೊಗಚಿಕೊಂಡಿತು. ಮೊದಲು ಬಂದಿದ್ದ ವ್ಯಕ್ತಿ ಮೊಗಚಿದ್ದ ದೋಣಿಯ ತುದಿಯನ್ನು ಹಿಡಿದು ಹೇಗೋ ಒದ್ದಾಡುತ್ತಿದ್ದ. ಅದನ್ನು ನೋಡಿದ ಅಂಬಿಗ ಅವನ ಬಳಿ ಸಾಗಿ ತನ್ನ ಬೆನ್ನ ಮೇಲೆ ಅವನ್ನು ಹೊತ್ತುಕೊಂಡು ಈಜಿ ದಡ ಸೇರಿದ. ಮತ್ತೊಬ್ಬಾತ ನೀರಿಗೆ ಬೀಳುತ್ತಲೇ ಹೆದರಿ ಹೃದಯ ಒಡೆದುಕೊಂಡು ಸತ್ತು ನದಿಯಲ್ಲಿ ತೇಲಿ ಹೋಗಿದ್ದ.
ವಿದ್ಯೆ ಗರ್ವವನ್ನು ಹೆಚ್ಚಿಸಬಾರದು. ವಿನಯವನ್ನು ಹೆಚ್ಚಿಸಬೇಕು. ಆಗ ನಮ್ಮ ಸಹಾಯಕ್ಕೆ ವಿದ್ಯೆ ಜೊತೆಯಾಗುವುದು. ಅಲ್ಲದೇ ವಿವೇಚನೆಯಿಂದ ವರ್ತಿಸಲು ಸಾಧ್ಯವಾಗುವುದು. ಅಂಬಿಗ ನಮ್ಮನ್ನು ನದಿ ದಾಟಿಸುತ್ತಾನೆ ಎನ್ನುವ ನಂಬಿಕೆಗಿಂತ ತನ್ನ ವಿದ್ಯೆಯೇ ಶ್ರೇಷ್ಠ ಎನ್ನುವವನ ಮಾತು ಪ್ರಸ್ತುತ ಕಾಲದಲ್ಲಿ ಬಹಳವೇ ಕಾಣಿಸುತ್ತದೆ. ಎಲ್ಲವೂ ನನ್ನಿಂದ, ನಾನೇ ಮಾಡಿರುವುದು, ನಾನಿರೋದಕ್ಕೆ ಇದೆಲ್ಲ ಸಾಧ್ಯವಾಯಿತು ಹೀಗೆ ಅಂದುಕೊಳ್ಳುತ್ತಾರೆ. ಇದು ಸುಳ್ಳು, ಭ್ರಮೆಯಷ್ಟೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಎತ್ತಿಕೊಂಡು ಹೋಗಬಹುದು. ಹಾಗಿರುವಾಗ ನಮ್ಮ ಸಾವಿನ ನಂತರ ಜಗತ್ತು ಇರುವುದಿಲ್ಲವೇನು? ನಮ್ಮನ್ನು ನಂಬಿದವರು ಬದುಕಿರುತ್ತಾರೆ ಅಲ್ಲವೆ? ನಮ್ಮ ಮಕ್ಕಳು ಮೊಮ್ಮಕ್ಕಳು ಹೀಗೆ ಪೀಳಿಗೆ ಮುಂದುವರೆಯುತ್ತದೆ ಅಲ್ಲವೆ? ಹಾಗಿದ್ದರೆ ನನ್ನಿಂದ ಏನೂ ಇಲ್ಲ. ಎಲ್ಲವೂ ನಮ್ಮಿಂದ. ಕೂಡು ಬಾಳುವಿಕೆಯಿಂದ ಮಾತ್ರ ಸಾಧ್ಯ. ಹಾಗಿದ್ದಾಗ ನಾವು ಯಾರು, ನಮ್ಮ ಮಿತಿ ಏನು ಇದರ ಬಗ್ಗೆ ನಮಗೆ ಸ್ವಲ್ಪವಾದರೂ ತಿಳಿದುಕೊಂಡರೆ ನಾವು ಪಡೆಯಬೇಕಾದ ಜ್ಞಾನ ಯಾವುದು ಎನ್ನುವದು ಅರ್ಥವಾಗುತ್ತದೆ.
ಯಾವ ಯಾವ ಕ್ಷೇತ್ರದಲ್ಲಿ ಯಾರು ನಿಪುಣರಾಗಿರ್ತಾರೆ ಎಂದು ನಮಗೆ ತಿಳಿದಿರುವುದಿಲ್ಲ. ಅವರ ಜಾಣ್ಮೆ, ಕೌಶಲ್ಯತೆ, ಚಾಕಚಕ್ಯತೆ, ಬುದ್ದಿವಂತಿಕೆ ಇವೆಲ್ಲ ಕೇವಲ ಪುಸ್ತಕ ಓದಿನಿಂದ ಬರುತ್ತದೆ ಎನ್ನುವುದೂ ಇಲ್ಲ. ಮೂರನೇ ತರಗತಿ ಓದಿದ ರಾಜಕುಮಾರ್ ಅವರು ಡಾಕ್ಟರೇಟ್ ಪಡೆದಿದ್ದಾರೆ. ಕೆಲವು ಸಾಹಿತಿಗಳು ತಾವು ಶ್ರೇಷ್ಠರು ಎಂದುಕೊಳ್ಳುತ್ತ ಸಿಕ್ಕ ಪ್ರಶಸ್ತಿಯನ್ನು ತಿರುಗಿಸಿದ್ದು ಕಂಡಿದ್ದೇವೆ. ಹಾಗಾಗಿ ಇಲ್ಲಿ ಅಳತೆ ಗೋಲು ಇರುವುದು ಮನುಷ್ಯನ ವ್ಯಕ್ತಿತ್ವದ ಮೇಲೆ ಹೊರತು ಡಿಗ್ರಿಯನ್ನು ಸಂಪಾದಿಸಿದ ಎಂದಲ್ಲ. ಜ್ಞಾನವನ್ನು ಸಂಪಾದಿಸಿಕೊಂಡು ನಮ್ಮ ಎದುರು ಬಂದ ವ್ಯಕ್ತಿಯನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಜ್ಞಾನಕ್ಕೆ ಬೆಲೆ ಬರುತ್ತದೆ. ಜ್ಞಾನವಿದೆ ಎನ್ನುವ ಅಹಂಕಾರ ತುಂಬಿಕೊಂಡರೆ ಅಲ್ಲಿರುವುದು ಶೂನ್ಯ ಮಾತ್ರ.
- * * * -