ಬೆಳಗಾವಿ,ಮೇ.06: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ನಡೆಸುವ ಸಮೀಕ್ಷಾಕಾರ್ಯ ಸೋಮವಾರ (ಮೇ.05) ಸದಾಶಿವನಗರದ ಮತಗಟ್ಟೆ ಸಂಖ್ಯೆ:152 ಗೆ ನಿಯೋಜಿಸಿದ ಮೇಲ್ವಿಚಾರಕರು ಹಾಗೂ ಗಣತಿದಾರರು ಂಕಕ ಮೂಲಕ ಮಾಹಿತಿಯನ್ನು ಭರ್ತಿ ಮಾಡುವುದರೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದರು.
ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಆಸೀಫ್ (ರಾಜು) ಸೇಠ, ಪರಿಶಿಷ್ಟ ಜಾತಿ ಕುಟುಂಬದವರಿಗೆ ಮುಂದಿನ ದಿನಮಾನಗಳಲ್ಲಿ ಈ ಸಮೀಕ್ಷೆ ಕಾರ್ಯದಿಂದ ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಸಮೀಕ್ಷೆಯಲ್ಲಿ ಎಲ್ಲ ಪರಿಶಿಷ್ಟ ಜಾತಿ ಕುಟುಂಬದವರು ಗಣತಿದಾರರಿಗೆ ಸಂಪೂರ್ಣ ಮಾಹಿತಿ ಒದಗಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ನಡೆಸುವ ಸಮೀಕ್ಷಾಕಾರ್ಯದ ನಿಮಿತ್ಯ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಗಳ ಮೂಲಕ ತಾಲೂಕಾ ಮಟ್ಟದ ಮಾಸ್ಟರ್ ಟ್ರೈನರ್ಗಳಿಗೆ ಹಾಗೂ ತಾಲೂಕಾ ಮಟ್ಟದ ಸಮನ್ವಯ ಸಮಿತಿ ಸದಸ್ಯರುಗಳಿಗೆ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಏಪ್ರಿಲ್ 28 ರಂದು ಸಮೀಕ್ಷೆಯ ಕುರಿತು ಒಂದು ದಿನದ ತರಬೇತಿ ನೀಡಲಾಗಿರುತ್ತದೆ.
ತಾಲೂಕಾ ಮಟ್ಟದ ಮಾಸ್ಟರ್ ಟ್ರೈನರ್ಗಳು 18 ವಿಧಾನ ಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಮೇಲ್ವಿಚಾರಕರಿಗೆ ಹಾಗೂ ಗಣತಿದಾರರಿಗೆ ಮೇ.02 ಮತ್ತು 03 ರಂದು ತರಬೇತಿ ನೀಡಲಾಗಿದ್ದು, ಬೆಳಗಾವಿ ಜಿಲ್ಲೆಯ 18 ವಿಧಾನ ಸಭಾ ಮತಕ್ಷೇತ್ರಗಳಿಗೆ 4525 ಗಣತಿದಾರರನ್ನು ಹಾಗೂ 470 ಮೇಲ್ವಿಚಾರಕರನ್ನು ಒಟ್ಟು 4995 ಸಿಬ್ಬಂದಿಗಳನ್ನು ಸಮೀಕ್ಷಾ ಕಾರ್ಯಕ್ಕೆ ನೇಮಕ ಮಾಡಲಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾಪೌರ ಮಂಗೇಶ ಪವಾರ, ಉಪಮಹಾಪೌರರಾದ ವಾಣಿ ಜೋಶಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ಹಾಗೂ ಪರಿಶಿಷ್ಟ ಜಾತಿ ಸಂಘಟನೆಗಳ ಮುಖಂಡರು, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ಹಾಜರಿದ್ದರು.