ರೈತ ಸಂಘದ ಮುದ್ದೇಬಿಹಾಳ ಅಧ್ಯಕ್ಷರಾಗಿ ಮಹಾಂತಗೌಡ ಬಿರಾದಾರ ಆಯ್ಕೆ
ವಿಜಯಪುರ 07 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರನ್ನಾಗಿ ವಕೀಲರು ಹಾಗೂ ಜನಪರ ಹೋರಾಟಗಾರರಾದ ಮಹಾಂತಗೌಡ ಬಿರಾದಾರ ಅವರನ್ನು ಆಯ್ಕೆಮಾಡಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ನಗರದ ಜಿಲ್ಲಾ ಕಚೇರಿಯಲ್ಲಿ ಆದೇಶ ಪ್ರತಿ ನೀಡಿ ಸಂಘದ ತತ್ವ ಸಿದ್ದಾಂತಗಳನ್ನು ಕಾನೂನಿನ ಅಡಿಯಲ್ಲಿ ರೈತರಿಗೆ ನ್ಯಾಯ ವದಗಿಸುವಂತೆ ತಿಳಿಸಿ ಆದೇಶಪ್ರತಿ ನೀಡಿದರು.
ಇಡೀ ತಾಲೂಕಿನಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಘಟಕಗಳನ್ನು ಮಾಡಿ ಅದರಲ್ಲಿ ಹಿರಿಯ, ಕಿರಿಯ, ಮಹಿಳಾ ಹಾಗೂ ಕಾರ್ಮಿಕ ಸಂಘಟನೆಗಳನ್ನು ಮಾಡುವಂತೆ ಹಾಗೂ ತಾಲೂಕಿನ ಎಲ್ಲಾ ರೈತರನ್ನು ಸಮಾನವಾಗಿ ಕಂಡು ಜಾತಿ, ಮತ, ಪಕ್ಷ, ಪಂಗಡ ಎನ್ನದೇ ಬಡವ ಶ್ರೀಮಂತ ಎನ್ನುವ ಭೇದ ಭಾವ ಮಾಡದೇ ಯಾವುದೇ ರೈತರಿಗೆ ಅನ್ಯಾಯವಾದಲ್ಲಿ ತಕ್ಷಣದಲ್ಲಿ ಅವರ ಪರವಾಗಿ ಹೋರಾಟ ಮಾಡಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡುವುದರ ಮೂಲಕ ನ್ಯಾಯ ವದಗಿಸಿಕೊಡಬೇಕು ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಮುಖಂಡರಾದ ಪ್ರಧಾನಿ ವಾಲಿಕಾರ, ಅಪ್ಪುಗೌಡ ಪಾಟೀಲ, ರಾಜು ವಾಲಿಕಾರ, ರಾಜುಗೌಡ ತುಂಬಗಿ ಇದ್ದರು.