ವಿಜಯಪುರ 08: ನಾನಾ ವಿಕಲತೆ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ವಿಕಲಚೇತನರ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ ಹೇಳಿದ್ದಾರೆ.
ಶನಿವಾರ ಇಂಡಿ ತಾಲೂಕಿನ ಝಳಕಿಯ ಹೋಲಿಕ್ರಾಸ ವಿಶೇಷ ಶಾಲೆಯ ಮಕ್ಕಳಿಗೆ ಬಿ.ಎಲ್.ಡಿ.ಇ ಆಸ್ಪತ್ರೆಯ ವತಿಯಿಂದ ಉಚಿತ ಕ್ಯಾಲಿಪರ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಒಟ್ಟು 21 ವಿಕಲತೆಗಳಿಗೆ ಸಂಬಂಧಿಸಿದಂತೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ದೈಹಿಕ ಅಂಗವಿಕಲತೆಯಲ್ಲಿ ಚಲನವಲನ ದೋಷ, ಕುಷ್ಠ ರೋಗ ನಿವಾರಣೆ, ಸೆರೆಬ್ರಲ್ ಫಾಲ್ಟಿ, ಕುಬ್ಜತೆ, ಮಸ್ಕುಲರ್ ಡಿಸ್ಟ್ರೋಪಿ, ಆಸಿಟ್ ದಾಳಿಗೊಳಗಾದವರು, ಅಂಧತ್ವ ಮತ್ತು ಮಂದದೃಷ್ಠಿ ದೋಷಗಳು, ಕಿವುಡುತನ ಮತ್ತು ಕ್ಲಿಷ್ಟ ಶ್ರವಣ, ಮಾತಿನ ಮತ್ತು ಭಾಷಾ ಅಂಗವಿಕಲತೆ, ಬೌದ್ಧಿಕ ಅಂಗವಿಕಲತೆ, ನಿದ್ರಿಷ್ಟ ಕಲಿಕಾ ನ್ಯೂನತೆ, ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್, ಮಾನಸಿಕ ಅಸ್ವಸ್ಥತೆ, ನರಸಂಬಂಧಿತ ಅಂಗವಿಕಲತೆ, ಮಲ್ಟಿಪಲ್ ಸ್ಲೆರೊಸಿಸ್, ಪಾರ್ಕಿನಸನ್ ಕಾಯಿಲೆ, ರಕ್ತ ಸಂಬಂಧಿತ ಹಿಮೋಫಿಲಿಯಾ, ಥಲಸ್ಸೇಮಿಯಾ, ಸಿಕಲಸೆಲ್ ಅನೀಮಿಯ, ಬಹುವಿಧ ಅಂಗವಿಲತೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಸರಕಾರಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ, ಕೆಲವು ಕಾಯಿಲೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯಗಳೂ ಇವೆ. ಹೀಗಾಗಿ ಈ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ವಿಕಲತೆ ಸಮಸ್ಯೆ ಎದುರಿಸುತ್ತಿರುವವರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘ- ಸಂಸ್ಥೆಗಳ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರವನ್ನು ಸಂಪರ್ಕಿಸಿ ಸರಕಾರಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗವಿಲಕತೆ ಸಮಸ್ಯೆ ಎದುರಿಸುತ್ತಿದ್ದ ನಾಲ್ಕು ಮಕ್ಕಳಿಗೆ ಎಂಟು ಕ್ಯಾಲಿಪರ್ ಗಳನ್ನು ವಿತರಿಸಲಾಯಿತು. ಈ ಮಕ್ಕಳು ಇದೇ ಮೊದಲ ಬಾರಿಗೆ ಬೇರೆಯವರ ಸಹಾಯವಿಲ್ಲದೆ ಕ್ಯಾಲಿಪರ್(ಕೃತಕ ಅಂಗಸಹಾಯಕ ಸಾಧನ) ಧರಿಸಿ ನಿಂತು ನಡೆದಾಡುವ ಮೂಲಕ ಹೊಸ ಅನುಭವ ಪಡೆದು ಸಂತಸಪಟ್ಟರು.
ಈ ಸಂದರ್ಭದಲ್ಲಿ ಕೇಂದ್ರದ ಗೋಪಾಲ ಎಂ. ದೇಶಪಾಂಡೆ, ಅನೀಲ ಚೌಧರಿ, ಕೃತಕ ಅಂಗಾಂಗ ತಯಾರಕರಾದ ಡಿ. ಡಿ. ಸ್ವಾನ್, ಹೋಲಿಕ್ರಾಸ ವಿಶೇಷ ಶಾಲೆಯ ನಿರ್ದೇಶಕಿ ನೀತಾ ಆಳ್ವಾ, ಸಿಬ್ಬಂದಿ ಲೀನಾ ಡಿಕೊಸ್ಟಾ, ವಿಜಯಪುರ ಅನೌಪಚಾರಿಕೆ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾ. ಟೇಲರ್ ಮಚಾದೊ ಎಸ್. ಜೆ., ಇಂಡಿಯ ದೀಪಾಲಯದ ನಿರ್ದೇಶಕಿ ಜಸಿಂತಾ ಮಚಾದೊ, ಲೀನಾ ಡಿಕೊಸ್ಟಾ, ಪೋಷಕರು, ಶಾಲೆಯ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.