ತಾಳಿಕೋಟಿ 08: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಖಂಡಿಸಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರ ಬಳಸಿ ಅವಮಾನಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ನಡಹಳ್ಳಿ ಅಭಿಮಾನಿ ಬಳಗದವರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣದ ಪ್ರಮುಖ ಸರ್ಕಲ್ ಗಳಲ್ಲಿ ನಾಯಕರ ಭಾವಚಿತ್ರಗಳಿಗೆ ಕ್ಷೀರಾಭಿಷೇಕವನ್ನು ಮಾಡಿ ಅವರ ಪ್ರತಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ನಂತರ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಮಾತನಾಡಿ ಶಾಸಕ ಯತ್ನಾಳರ ಉಚ್ಚಾಟನೆ ಪಕ್ಷದ ಕೇಂದ್ರ ಸಮಿತಿ ತೀರ್ಮಾನವೆ ಹೊರತು, ಮಾಜಿ ಮುಖ್ಯಮಂತ್ರಿ ಯಡಿಯೂರ್ಪ ಹಾಗೂ ವಿಜಯೇಂದ್ರರ ತೀರ್ಮಾನ ಅಲ್ಲ.ಅವರ ಉಚ್ಚಾಟನೆ ವಿರುದ್ಧ ಪ್ರತಿಭಟಿಸುವುದು ಅವರ ಬೆಂಬಲಿಗರ ಹಕ್ಕಾಗಿದೆ ಆದರೆ ಇದರಲ್ಲಿ ಕೆಲವು ಕಾಂಗ್ರೆಸ್ಸಿನ ಏಜೆಂಟರು ಹೊಕ್ಕಿಕೊಂಡು ನಮ್ಮ ನಾಯಕರ ಕುರಿತು ಅಸಭ್ಯ ಮಾತುಗಳನ್ನಾಡಿ ಅವರ ತೇಜೋವಧೆ ಮಾಡುತ್ತಿದ್ದಾರೆ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ, ಮಾಜಿ ಶಾಸಕ ನಡಹಳ್ಳಿಯವರು ಅಭಿವೃದ್ಧಿಯ ಹರಿಕಾರರು, ಇಡೀ ರಾಜ್ಯದಲ್ಲಿ ಇಂದು ತಮ್ಮ ವ್ಯಕ್ತಿತ್ವದಿಂದ ಗುರುತಿಸಲ್ಪಡುವ ನಾಯಕ, ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಇಂದು ಕಾಣುತ್ತಿರುವ ಅಭಿವೃದ್ಧಿಗೆ ಅವರೇ ಕಾರಣ ಇಂಥವರ ಕುರಿತು ಹಗುರವಾಗಿ ಮಾತನಾಡುವುದು ಶೋಭೆ ತರುವ ವಿಷಯ ಅಲ್ಲ ಇದನ್ನು ಇಲ್ಲಿಗೆ ನಿಲ್ಲಿಸದೆ ಹೋದಲ್ಲಿ ನಾವು ಬೀದಿಗಿಳಿದು ಇನ್ನಷ್ಟು ಹೋರಾಟವನ್ನು ಮಾಡಬೇಕಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿ ಇತ್ತೀಚೆಗೆ ಪಟ್ಟಣದಲ್ಲಿ ಬಸನಗೌಡ ಯತ್ನಾಳರ ಉಚ್ಚಾಟನೆ ವಿರುದ್ಧ ಪ್ರತಿಭಟಿಸುವ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ಸಿನ ಏಜೆಂಟರು ನಮ್ಮ ನಾಯಕರ ಭಾವಚಿತ್ರಗಳಿಗೆ ಅಮಾನವೀಯವಾಗಿ ಅಪಮಾನಿಸಿ ವಿಕೃತವನ್ನು ಮೆರದಿದ್ದಾರೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಮತಕ್ಷೇತ್ರದಲ್ಲಿ ನಡೆಯುತ್ತಿರುವ ಈ ಎಲ್ಲ ಪ್ರತಿಭಟನೆಗಳ ಹಿಂದೆ ಜಿಪಂ ಮಾಜಿ ಸದಸ್ಯ ಪ್ರಭುಗೌಡ ದೇಸಾಯಿ ಎಂಬ ಕೆಟ್ಟ ವ್ಯಕ್ತಿಯ ಕೈವಾಡವಿದೆ, ಇವನೊಬ್ಬ ಕೃತಘ್ನ ವ್ಯಕ್ತಿ,ಈತನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗುವಾಗ ನಮ್ಮ ಜಿಲ್ಲಾಧ್ಯಕ್ಷ ಅಂಗಡಿಯವರ ಧರ್ಮಪತ್ನಿ ಅವರು ತಮ್ಮ ಮತದ ಮೂಲಕ ಅವರಿಗೆ ಬೆಂಬಲ ನೀಡಿದ್ದರು ಈ ಉಪಕಾರವನ್ನೂ ನೆನಪಿಡದ ಈ ವ್ಯಕ್ತಿ ಅಂಗಡಿ ಅವರು ತಮ್ಮ ಸ್ನೇಹಿತರ ಜೊತೆಗೆ ಸಂಭ್ರಮಿಸಿದ ಕೆಲವು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಅವರ ತೇಜೋವಧೆ ಮಾಡುತ್ತಿದ್ದಾನೆ, ಬಿಜೆಪಿ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಏಜೆಂಟ್ ಆಗಿ ವರ್ತಿಸುವ ಇವನಿಗೆ ಯಾವ ನೈತಿಕತೆ ಇದೆ, ನಡಹಳ್ಳಿ ಅವರು ಎಂದೂ ಚಿಲ್ಲರೆ ರಾಜಕಾರಣ ಮಾಡಿದವರಲ್ಲ,ದಾನ ದಾಸೋಹಗಳ ಮೂಲಕ ರಾಜಕೀಯಕ್ಕೆ ಬಂದವರು, ಅವರೆಂದೂ ಜಾತಿ ರಾಜಕಾರಣ ಮಾಡಿಲ್ಲ ಎಲ್ಲ ಸಮಾಜವನ್ನು ಪ್ರೀತಿಸುವ ವ್ಯಕ್ತಿ, ನಾವ್ಯಾರು ಪಂಚಮಸಾಲಿ ಸಮಾಜದ ವಿರೋಧಿಗಳಲ್ಲ, ಈ ವ್ಯಕ್ತಿ ಆ ಸಮಾಜವನ್ನು ಬಳಸಿಕೊಂಡು ಇಂತಹ ಹೀನ ಕೆಲಸಗಳನ್ನು ಮಾಡುತ್ತಿದ್ದಾನೆ. ಮುಂದೆಯೂ ಈ ಹೀನ ಕಾರ್ಯವನ್ನು ಮುಂದು ವರಸಿದಲ್ಲಿ ಇವನ ವಿರುದ್ಧ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಯಡಿಯೂರ್ಪನವರು ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದವರು, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಅವರನ್ನು ಎಲ್ಲ ಪಕ್ಷದವರು ಗೌರವಿಸುತ್ತಾರೆ ಇಂಥಹ ಮಹಾನ್ ನಾಯಕನ ಕುರಿತು ಹಗುರವಾಗಿ ಮಾತನಾಡುವುದು ಶೋಭೆ ತರುವಂತಹದು ಅಲ್ಲ ಎಂದರು.
ಮುಖಂಡರಾದ ವಾಸುದೇವ ಹೆಬಸೂರ, ಎಂ.ಎಸ್.ಸರಶಟ್ಟಿ, ಪ್ರಕಾಶ್ ಹಜೇರಿ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಮಲ್ಲನಗೌಡ ಪೊಲೀಸ್ ಪಾಟೀಲ, ರಾಜುಗೌಡ ಕೋಳೂರ, ಗುಂಡಕನಾಳ ರಾಜುಗೌಡ, ಶಂಕರಗೌಡ ದೇಸಾಯಿ, ಮುತ್ತುರಾಜ್ ಜಹಗೀರದಾರ, ವಿಶ್ವನಾಥ ರೆಡ್ಡಿ ಪಾಟೀಲ, ಸೋಮನಗೌಡ ಪಾಟೀಲ, ಬಸವರಾಜ ಗುಳಬಾಳ, ಸಂಗಮ ದೇವರಹಳ್ಳಿ, ಗೌರಮ್ಮ ಹುನಗುಂದ, ರಾಘು ಬಿಜಾಪುರ, ಈಶ್ವರ ಹೂಗಾರ,ನದೀಮ್ ಕಡು ಮತ್ತಿತರರು ಇದ್ದರು.