ತೊಗರಿ ಬೆಳೆ ಹಾನಿ ಪರಿಹಾರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸಿಂದಗಿ 07: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಬಿದ್ದರೂ ಕೂಡಾ ಜುಲೈನಲ್ಲಿ ಮಳೆಯ ಕೊರತೆ, ಬೀಜಗಳಲ್ಲಿ ಸಮಸ್ಯೆ, ಮಂಜಿನ ವಾತಾವರಣದಿಂದಾ ಸಿಂದಗಿ ತಾಲೂಕಿನಲ್ಲಿ ಶೇ. 90 ರಷ್ಟು ತೊಗರಿ ಬೆಳೆ ವಿಫಲವಾಗಿದ್ದು, ರೈತರಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ಗುರುವಾರ ಸಿಂದಗಿ ಮಂಡಲ ರೈತ ಮೋರ್ಚಾ ವತಿಯಿಂದ ಬೃಹತ್ತ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ ರಮೇಶ ಬೂಸನೂರ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಎತ್ತಿನ ಬಂಡಿ, ಮತ್ತು ಟ್ಯಾಕ್ಟರ್‌ಗಳ ಜೊತೆಗೆ ರೈತರೊಂದಿಗೆ ಪ್ರಾರಂಭವಾದ ಮೇರವಣಿಗೆಯು ಟಿಪ್ಪು ಸುಲ್ತಾನ ಮಾರ್ಗವಾಗಿ ಪುನಃ ಅಂಬೇಡ್ಕರ್ ವೃತ್ತದ ಮೂಲಕ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿತು. ನಂತರ ಅಲ್ಲಿ ಪ್ರತಿಭಟನೆ ನಡೆಸಿ ತೊಗರಿ ಬೆಳೆ ಹಾನಿ ಸಮಿಕ್ಷೆ ನಡೆಸಬೇಕು, ಪರಿಹಾರ ಹಣ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಬಳಿಕ ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಮುಂಗಾರಿಯಲ್ಲಿ ತೊಗರಿ ಬೆಳೆಯೇ ಪ್ರಮುಖವಾಗಿದ್ದು, ಈ ಬೆಳೆ ನೆಟೆಹೋಗಿ ಇಳುವರಿ ಹಾನಿಯಾಘಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾನೆ. ರೈತರ ಸಂಕಷ್ಟ ಸರ್ಕಾರಕ್ಕೆ ತಲುಪಿಸಲು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳಿಯ ಶಾಸಕರು ಇಲ್ಲವೇ. ಅವರು ಏನು ಮಾಡುತ್ತಿದ್ದಾರೆ. ಪತ್ರಕರ್ತರೇ ರೈತನ ಜಮೀನಿಗೆ ಹೋಗೆ ತೊಗರಿ ಹಾನಿ ಕುರಿತು ವರದಿ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಳೆ ಹಾನಿ ಕುರಿತು ಕಿಂಚಿತ್ತು ಯೋಚಿಸುತ್ತಿಲ್ಲ ಎಂದು ಆಕ್ರೋಷ ವ್ಯಕ್ತ ಪಡೆಸಿದರು.
ಸಿಂದಗಿ ತಾಲೂಕಿನಲ್ಲಿ 87 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ತೊಗರಿಯಲ್ಲಿ ಶೇ.90ರಷ್ಟು ತೊಗರಿ ಬೆಳೆ ಹಾನಿಯಾಗಿದೆ. ಈ ಕುರಿತು ಅಧಿಕಾರಿಗಳು ಸಮಿಕ್ಷೆ ಮಾಡುತ್ತಿಲ್ಲ. ಕೇಳಿದರೆ. ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ. ಕೂಡಲೇ ಈ ಬೆಳೆ ಕಳಪೆ ಬೀಜದಿಂದ ಅಥವಾ ಹವಾಮಾನದಿಂದ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಒಪ್ಪಿಸಬೇಕು. ಬೆಳೆ ವಿಮೆ ತುಂಬಿದವರಿಗೂ ಸೇರಿದಂತೆ ವಿಮೆ ತುಂಬದ ರೈತರಿಗೂ ಬೆಳೆ ಹಾನಿ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕ್ಷೇತ್ರದಲ್ಲಿ ತೊಗರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು. ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಬೆಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶ ಹೊರಡಿಸಬೇಕು. ಡಿ.11ರೊಳಾಗಿ ಬೆಳೆ ಹಾನಿ ಸಮೀಕ್ಷೆ ಸರ್ಕಾರಕ್ಕೆ ತಲುಪ ಬೇಕು. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಸಿಂದಗಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ತಾಲೂಕಾ ಅಧ್ಯಕ್ಷ ಪೀರು ಕೆರೂರ, ಈರಣ್ಣ ರಾವೂರ, ಗುರು ತಳವಾರ ಮಾತನಾಡಿ, ತೊಗರಿ ಬೆಳೆ ವಿಫಲತೆಯ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು. ಶಿಘ್ರದಲ್ಲಿ ತೊಗರಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಡಿ.11ರೊಳಗೆ ತೊಗರಿ ಬೆಳೆಹಾನಿ ಸಮಿಕ್ಷೆ ನಡೆಸಿ ಸರ್ಕಾಕ್ಕೆ ವರದಿ ಸಲ್ಲಿಸಬೇಕು. ಇಲ್ಲದ ಪಕ್ಷದಲ್ಲಿ ಸಹಾಯಕ ಕೃಷಿ ಇಲಾಖೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸಿದ್ದು ಬುಳ್ಳಾ, ಶಿವಕುಮಾರ ಬಿರಾದಾರ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಚಂದ್ರಶೇಖರ ಅಮಲಿಹಾಳ, ಶ್ರೀಶೈಲ ಚಳ್ಳಗಿ, ಅನಸುಬಾಯಿ ಪರಗೊಂಡ, ಶ್ಯಾಮಲಾ ಮಂದೇವಾಲಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಚೇತನ ರಾಂಪೂರ, ದೇವೆಂದ್ರ ಪರಗೊಂಡ, ಖಾಜು ಬಂಕಲಗಿ, ವಿನಾಯಕ ದೇವರಮನಿ ಸೇರಿದಂತೆ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ರೈತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಜೊತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದರು.