ಕಾಲುವೆ ಕಾಮಗಾರಿ ಭೂಮಿ ಪೂಜೆಗೆ ಸಚಿವ ಎಂ.ಬಿ. ಪಾಟೀಲ ರವರಿಂದ ಚಾಲನೆ
ವಿಜಯಪುರ, 4: ಬಬಲೇಶ್ವರ ತಾಲೂಕಿನ ನಿಡೋಣಿ ಹಾಗೂ ಕಾಖಂಡಕಿ ಸುತ್ತಲಿನ ಅತೀ ಎತ್ತರದ 26 ಸಾವಿರ ಎಕರೆ ಪ್ರದೇಶಕ್ಕೆ ನೀರೋದಗಿಸುವ 5ಎ ಮತ್ತು 5 ಬಿ ಲಿಫ್ಟ್ ಏತನಿರಾವರಿ ಕಾಮಗಾರಿ ಮತ್ತು 15ನೇ ವಿತರಣಾ ಕಾಲುವೆ ಕಾಮಗಾರಿ ಭೂಮಿ ಪೂಜೆಯನ್ನು ದಿ.7 ಬುಧವಾರರಂದು ಸಂಜೆ 4 ಗಂಟೆಗೆ ನಿಡೋಣಿ ಗ್ರಾಮದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ನೆರವೇರಿಸಲಿದ್ದಾರೆ. ನಂತರ ನಿಡೋಣಿ ಚೆನ್ನವೀರೇಶ್ವರ ಪ್ರೌಢ ಶಾಲೆ ಮೈದಾನದಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಎಲ್ಲ ಪ್ರಗತಿಪರ ರೈತರು, ವಿವಿಧ ಯೋಜನೆಗಳ ಫಲಾನುಭವಿಗಳು. ರೈತ ಕೃಷಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಬಬಲೇಶ್ವರ ತಾಲೂಕು, ಕೆರೆ ತುಂಬುವ ಯೋಜನೆ, ಮುಳವಾಡ ಏತನೀರಾವರಿ ಮಲಘಾಣ ಪಶ್ಚಿಮ ಕಾಲುವೆ ಹಾಗೂ ಬಬಲೇಶ್ವರ ಶಾಖಾ ಕಾಲುವೆಯಿಂದ ಈಗಾಗಲೆ ನೀರಾವರಿಗೆ ಒಳಪಟ್ಟಿದೆ. ಕಾಖಂಡಕಿ ಮತ್ತು ಶೇಗುಣಶಿ ಹಾಗೂ ನಿಡೋಣಿ, ಹೆಬ್ಬಾಳಟ್ಟಿ, ನಾಗರಾಳ, ಕುಮಠೆ, ಅರ್ಜುಣಗಿ, ಯಕ್ಕುಂಡಿ, ಹೊಕ್ಕುಂಡಿ ಮತ್ತು ತಿಗಣಿಬಿದರಿ ಸುತ್ತಲಿನ ಕೆಲವು ಪ್ರದೇಶಗಳು ಎತ್ತರದ ಕಾರಣ ನೀರಾವರಿಯಿಂದ ವಂಚಿತವಾಗಿತ್ತು. ಎಂ.ಬಿ.ಪಾಟೀಲ ಅವರ ಭಗೀರಥ ಪ್ರಯತ್ನದಿಂದ ಈ ಎತ್ತರದ ಪ್ರದೇಶಕ್ಕೆ ನಿರೋದಗಿಸುವುದಕ್ಕಾಗಿ 5ಎ ಮತ್ತು 5ಬಿ ಎಂಬ ಎರಡು ಏತನೀರಾವರಿ ಯೋಜನೆಗಳನ್ನು ವಿನ್ಯಾಸಗೊಳಿಸಿ ಮಂಜೂರಿಗೊಳಿಸಿದ್ದು, ದಿ.7 ಬುಧವಾರರಂದು ಸಂ.4ಗಂ. ಭೂಮಿ ಪೂಜೆ ಸಲ್ಲಿಸುವುದರ ಮೂಲಕ ಕಾಮಗಾರಿಯನ್ನು ಆರಭಿಸಲಾಗುವುದು. ಈ ಯೋಜನೆಯಿಂದ ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40 ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ 127 ಕೋಟಿ ಹಾಗೂ ವಿತರಣಾ ಸಂಖ್ಯೆ 15 ಮತ್ತು ಲ್ಯಾಟರಲ್ ಒಳಗೊಂಡ 13272 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಪ್ಯಾಕೇಜ್ ಕಾಮಗಾರಿ ಕೈಗೆತ್ತಿಕೊಳ್ಳಲು 108 ಕೋಟಿ ವೆಚ್ಚದ ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ ಬಾಕಿ ಉಳಿದಿರುವ ಒಟ್ಟು 26 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ.
ಈ ನೀರಾವರಿ ಯೋಜನೆಗಳಿಂದ ಅನುಕೂಲವಾಗಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಹಣ್ಣು ಹಂಪಲಗಳನ್ನು ತಂದು ಸಚಿವ ಎಂ. ಬಿ. ಪಾಟೀಲವರಿಗೆ ಹಣ್ಣು ಹಂಪಗಳಿಂದ ತುಲಾಭಾರ ಮಾಡುತ್ತಿರುವುದು ವಿಶೇಷವಾಗಿದೆ.