ಕಾರ್ಮಿಕರನ್ನು ಭೇಟಿ ಮಾಡಿ ಸಚಿವ ಎಂ. ಬಿ. ಪಾಟೀಲ
ವಿಜಯಪುರ 25: ಇಟ್ಟಂಗಿ ಭಟ್ಟಿಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಇನ್ನು ಮುಂದೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಿಲ್ಲ. ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಸಕ್ಕರೆ ಕಾರ್ಖಾನೆ ಅಥವಾ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಯ ನೀಡಿದ್ದಾರೆ.
ಇಂದು ಶನಿವಾರ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿ ವೈಯಕ್ತಿಕವಾಗಿ ತಲಾ ರೂ. 50 ಆರ್ಥಿಕ ನೆರವು ನೀಡಿದರು. ಅಲ್ಲದೇ, ನೀವು ಇನ್ನು ಮುಂದೆ ಜಮಖಂಡಿ ತಾಲೂಕಿನಲ್ಲಿ ಕೆಲಸ ಮಾಡಲು ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು.
ಕಾರ್ಮಿಕರಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಆತ್ಮಸ್ಥ್ಮೈರ್ಯ ತುಂಬಿದರು. ನಿಮಗೆ ಸರಕಾರದಿಂದ ಸಕಲ ನೆರವು ಒಸಗಿಸಲು ಕ್ರಮ ಕೈಗೊಳ್ಳುತ್ತೇನೆ. ಸರಕಾರ ನಿಮ್ಮೊಂದಿಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ತಪ್ಪಿತಸ್ಥರಿಗೆ ಬುದ್ಧಿ ಕಲಿಸಲು ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಘಟನೆಯ ಆಘಾತದಿಂದ ಹೊರ ಬರಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಆರೋಪಿಗಳು ಹೇಯ ಕೃತ್ಯ ಮಾಡುವ ಮೂಲಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಬೆಳಕಿಗೆ ಬಂದಾಗ ನಾನು ಬೆಂಗಳೂರಿನಲ್ಲಿ ಸಭೆಯಲ್ಲಿದ್ದೆ. ವಿಜಯಪುರ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದರು. ತಕ್ಷಣ ವಿಜಯಪುರ ಎಸ್ಪಿಯವರೊಂದಿಗೆ ಮಾತನಾಡಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಘಟನೆಯ ಬಳಿಕ ಭಯ ಮತ್ತು ಆಘಾತದಲ್ಲಿದ್ದ ಕಾರ್ಮಿಕರು ತಕ್ಷಣ ದೂರು ನೀಡಿಲ್ಲ. ಹೀಗಾಗಿ ಘಟನೆ ಗಮನಕ್ಕೆ ಬಂದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮೊದಲು ಈ ಕಾರ್ಮಿಕರನ್ನು ಘಟನೆಯ ಆಘಾತದಿಂದ ಹೊರತರಲಾಗುವುದು ಎಂದು ಅವರು ತಿಳಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿ. ಪಂ. ಸಿಇಓ ರಿಷಿ ಆನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಡಾ. ಮಹಾಂತೇಶ ಬಿರಾದಾರ, ವಿಜಯಪುರ ಗ್ರಾಮೀಣ ಸಿಪಿಐ ರಾಯಗೊಂಡ ಜಾನರ, ಮುಖಂಡರಾದ ಅಡಿವೆಪ್ಪ ಸಾಲಗಲ ಷಹಜಹಾನ್ ಮುಲ್ಲಾ, ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.