ಸಂಘ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಪಕ್ವಾಡ ಕಾರ್ಯಕ್ರಮ
ಹಾವೇರಿ 17: ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ ಅವರು ಹೇಳಿದರು.
ದೇವಗಿರಿ ಅಂಗನವಾಡಿ ಸಂಖ್ಯೆ 175ರಲ್ಲಿ ಬುಧವಾರ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಸಿದ್ದಮ್ಮನವರ ಅವರು ಅಪೌಷ್ಟಿಕತೆ ನಿರ್ವಹಣೆಗೆ ಸೂಕ್ತ ಕ್ರಮಗಳ ಬಗ್ಗೆ, ಮಕ್ಕಳಲ್ಲಿ ಬೊಜ್ಜು ನಿವಾರಣೆಗೆ ಹಾಗೂ ಆರೋಗ್ಯಕರ ಜೀವನ ಶೈಲಿ ಚಟುವಟಿಕೆಗಳ ಕುರಿತು ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎ.ತಹಶೀಲ್ದಾರ ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿ ಅಪೌಷ್ಠಿಕತೆ ಹೊಗಲಾಡಿಸುವುದು ರಾಷ್ಟ್ರೀಯ ಪೋಷಣ ಪಕ್ವಾಡ ಮುಖ್ಯ ಉದ್ದೇಶವಾಗಿದೆ. 2018 ಮಾರ್ಚ್ 8 ರಂದು ಪೋಷಣ ಅಭಿಯಾನ ಆರಂಭಿಸಲಾಗಿದೆ. ಪ್ರತಿ ವರ್ಷ ಏಪ್ರಿಲ್ 8 ರಿಂದ 22ರವರೆಗೆ ಪ್ರತಿ ದಿನ ಕಾರ್ಯಕ್ರಮ ಆಯೋಜನೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ದೇವಗಿರಿ ಗ್ರಾ.ಪಂ.ಅಧ್ಯಕ್ಷರು, ಸಂರಕ್ಷಣಾಧಿಕಾರಿ ಶೋಭಾ ವನ್ನಳ್ಳಿ, ಹಿರಿಯ ಮೇಲ್ವಿಚಾರಕಿ ರೇಖಾ ನಾಡಿಗೇರ , ರೇಣುಕಾ ತಳವಾರ, ಹೊನ್ನಮ್ಮ ರೋಡಗೋಳಪ್ಪನವರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು.