ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ: ಭಾರತ

ಬ್ಯಾಂಕಾಕ್ 02: ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ಸುಕತೆಯ ವಾಗ್ದಾನವನ್ನು ಭಾರತ ನಯವಾಗಿ ತಿರಸ್ಕರಿಸಿದ್ದು, ಮೂರನೆಯವರ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ 

  "ಒಂದು ವೇಳೆ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿ ಯಾರಾದರೂ ಮಧ್ಯಪ್ರವೇಶಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಯಸಿದಲ್ಲಿ ಉಭಯ ದೇಶಗಳ ಜೊತೆ ಮಾತುಕತೆಗೆ ಸಿದ್ಧ" ಎಂದು ಟ್ರಂಪ್ ತಿಳಿಸಿದ್ದರು. 

 ಆದರೆ, "ಕಾಶ್ಮೀರದ ಬಗ್ಗೆ ಯಾವುದೇ ಚರ್ಚೆ ನಡೆಯುವುದು ಖಚಿತವಾದಲ್ಲಿ, ಅದು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯವಾಗಿ ನಡೆಯಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ  ಮೈಕ್ ಪೊಂಪಿಯೊ ಅವರಿಗೆ ಮನದಟ್ಟು ಮಾಡಲಾಗಿದೆ" ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ. 

  ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ 9 ನೇ ಪೂರ್ವ ಏಷ್ಯಾ ವಿದೇಶಾಂಗ ಸಚಿವರ ಶೃಂಗಸಭೆಯ ಸಂದರ್ಭದಲ್ಲಿ ಎಸ್ ಜೈಶಂಕರ್ ಮತ್ತು ಮೈಕ್ ಪೊಂಪಿಯೊ ಮಾತುಕತೆ ನಡೆಸಿದ್ದಾರೆ. 

  "ಕಾಶ್ಮೀರ ವಿಷಯ ಹೊರತುಪಡಿಸಿ ಹಲವು ಪ್ರಾದೇಶಿಕ ಸಮಸ್ಯೆಗಳ ಕುರಿತು ಪೊಂಪಿಯೊ ಅವರೊಡನೆ ವ್ಯಾಪಕ ಚರ್ಚೆ ನಡೆಸಲಾಗಿದೆ" ಎಂದೂ ಜೈಶಂಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಪ್ಪುವುದಾದಲ್ಲಿ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳೇ ಹೇಳಿಕೆ ನೀಡಿದ್ದರು.  ಇದಕ್ಕೆ  ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಕ್ರಿಯಿಸಿದ್ದ ಜೈಶಂಕರ್, "ಗಡಿ ಭಯೋತ್ಪಾದನೆ ನಿಲ್ಲುವವರೆಗೂ ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಭಾರತ ಮತ್ತು ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ದ್ವಿಪಕ್ಷೀಯ ಸಮಸ್ಯೆ ಬಗೆಹರಿಸಿಕೊಳ್ಳಲು, 1972 ರ ಶಿಮ್ಲಾ ಒಪ್ಪಂದ ಮತ್ತು 1999 ರ ಲಾಹೋರ್ ಘೋಷಣೆ ಕಟ್ಟುನಿಟ್ಟಾಗಿ ಆಧಾರವನ್ನು ಒದಗಿಸುತ್ತದೆ ಎಂದು ಹೇಳಿದ್ದರು,   ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಜೈಶಂಕರ್, ವಿಯೆಟ್ನಾ, ಶ್ರೀಲಂಕಾ, ಮಂಗೋಲಿಯಾ, ಟಿಮೋರ್ ಲೆಸ್ಟೆ ದೇಶದ ವಿದೇಶಾಂಗ ಸಚಿವರೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

"ಭಾರತದ ಪ್ರಮುಖ ನೆರೆಯ ರಾಷ್ಟ್ರ ಶ್ರೀಲಂಕಾದ ವಿದೇಶಾಂಗ ಸಚಿವ ಹಾಗೂ ಮೌಲ್ಯಯುತ ಗೆಳೆಯ ತಿಲಕ್ ಮಾರಪನ ಅವರೊಂದಿಗೆ ಚರ್ಚಿಸಲಾಗಿದ್ದು, ಭಯೋತ್ಪಾದನೆ ನಿರ್ಮೊಲನೆಗೆ ಕೈಜೋಡಿಸಲು ನಿರ್ಧರಿಸಲಾಗಿದೆ" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.